ಸೈರಸ್ ಮಿಸ್ತ್ರಿ ಟಾಟಾ ಸಮೂಹದ ಹೊಸ ಮೇಸ್ತ್ರಿ

ಇದೇ ವೇಳೆ ರತನ್ ಟಾಟಾ ಉತ್ತರಾಧಿಕಾರಿ ಯಾರು ಎನ್ನುವ ಬಹುಕಾಲದ ಪ್ರಶ್ನೆಗೆ ಉತ್ತರ ನೀಡಿದ್ದು, 44 ವರ್ಷದ ಸೈರಸ್ ಪಲ್ಲೊಂಜಿ ಮಿಸ್ತ್ರಿ ಅವರನ್ನು 80 ಶತಕೋಟಿ ಡಾಲರ್ ಮೌಲ್ಯದ ಟಾಟಾ ಸಮೂಹದ ಸಾರಥಿಯನ್ನಾಗಿ ಮಾಡಿದ್ದಾರೆ. ಸರಿಯಾಗಿ ಇನ್ನೊಂದು ವರ್ಷಕ್ಕೆ ಅವರು ಪದಗ್ರಹಣ ಮಾಡಲಿದ್ದಾರೆ. ಅಲ್ಲಿಯವರೆಗೂ ಹಿರಿಯ ಟಾಟಾ ಬಳಿ ಪ್ರೊಬೆಷನ್ ನಲ್ಲಿರುತ್ತಾರೆ.
ಶಪೂರ್ಜಿ ಪಲ್ಲೊಂಜಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸೈರಸ್ ಅವರನ್ನು ಟಾಟಾ ಸನ್ಸ್ ನಿರ್ದೇಶಕ ಮಂಡಳಿಯ ನೂತನ ಉತ್ತರಾಧಿಕಾರಿ ಎಂದು ಬುಧವಾರ ಅಧಿಕೃತವಾಗಿ ಘೋಷಿಸಲಾಗಿದೆ. ಶಪೂರ್ಜಿ ಪಲ್ಲೊಂಜಿ ಸಂಸ್ಥೆ ಟಾಟಾ ಸನ್ಸ್‌ನಲ್ಲಿ ಶೇ 18ರಷ್ಟು ಪಾಲು ಹೊಂದಿದೆ.
12,500 ಕೋಟಿ ರೂ ನಿರ್ಮಾಣ ರಂಗದ ದೈತ್ಯ ಸಂಸ್ಥೆಯಾಗಿರುವ ಶಪೂರ್ಜಿ ಪಲ್ಲೊಂಜಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸೈರಸ್ ಅವರ ಹೆಗಲಿಗೆ ಈಗ ಹೆಚ್ಚಿನ ಜವಾಬ್ದಾರಿ ಬೀಳಲಿದೆ. ಉಪ್ಪಿನಿಂದ ಹಿಡಿದು ಸಾಫ್ಟ್‌ವೇರ್ ವರೆಗೆ ವೈವಿಧ್ಯಮಯ ವಹಿವಾಟು ನಡೆಸುತ್ತಿರುವ 4,00,000 ಕೋಟಿ ರೂ ಟಾಟಾ ಸಮೂಹ ನಿರ್ವಹಿಸುವ ಟಾಟಾ ಸನ್ಸ್‌ನ ಹೊಸ ಅಧ್ಯಕ್ಷರಾಗಲಿದ್ದಾರೆ.
ಮಿಸ್ತ್ರಿ ಅವರು ಟಾಟಾ ಸಮೂಹಕ್ಕೆ ಹೊಸಬರೇನೂ ಅಲ್ಲ. 2006ರಲ್ಲಿಯೇ ಇವರು ಟಾಟಾ ಸನ್ಸ್‌ನ ಆಡಳಿತ ಮಂಡಳಿಗೆ ನೇಮಕಗೊಂಡಿದ್ದರು. ಸದ್ಯಕ್ಕೆ ಅವರು ಟಾಟಾ ಸನ್ಸ್ ಮತ್ತು ಟಾಟಾ ಎಲ್‌ಎಕ್ಸಿ (ಭಾರತ) ನಿರ್ದೇಶಕರಾಗಿದ್ದಾರೆ. ರತನ್ ಟಾಟಾ ಅವರ ಉತ್ತರಾಧಿಕಾರಿ ಆಯ್ಕೆಗೆ ರಚಿಸಲಾಗಿದ್ದ ಐದು ಮಂದಿ ಸಮಿತಿಯ ಸದಸ್ಯರೂ ಆಗಿದ್ದರು.
1968ರ ಜುಲೈ 4ರಂದು ಜನಿಸಿರುವ ಸೈರಸ್, 1991ರಲ್ಲಿ ಶಪೂರ್ಜಿ ಪಲ್ಲೊಂಜಿ ಸಂಸ್ಥೆಗೆ ನಿರ್ದೇಶಕರಾಗಿ ಸೇರಿಕೊಂಡು ಸಂಸ್ಥೆಯ ವಹಿವಾಟನ್ನು ಗಮನಾರ್ಹವಾಗಿ ವಿಸ್ತರಿಸಿದರು. ಸದ್ಯಕ್ಕೆ ಈ ಸಂಸ್ಥೆಯಲ್ಲಿ 23 ಸಾವಿರದಷ್ಟು ಸಿಬ್ಬಂದಿ ದುಡಿಯುತ್ತಿದ್ದಾರೆ. ಭಾರತ ಸೇರಿದಂತೆ ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾದಲ್ಲಿಯೂ ವಹಿವಾಟು ನಡೆಸುತ್ತಿದೆ.












Click it and Unblock the Notifications