ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದಲ್ಲಿ ಈಶ್ವರಪ್ಪ ಸೋದರ ಹಾರಿಸಿದ ಬಂಡಾಯ ಬಾವುಟ

By Srinath
|
Google Oneindia Kannada News

ks-eshwarappa-brother-rebells-in-shivamogga-bjp
ಶಿವಮೊಗ್ಗ, ನ.23: ಇತ್ತ ಬಿಜೆಪಿಯ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಬಳ್ಳಾರಿ ಕದನದಲ್ಲಿ ಧೂಳೆಬ್ಬಿಸುತ್ತಿರುವ ಹೊತ್ತಿನಲ್ಲೇ ಅತ್ತ ಅವರ ತವರು ಜಿಲ್ಲೆಯಲ್ಲಿ ಕಮಲ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಕುತೂಹಲದ ಸಂಗತಿಯೆಂದರೆ ಪಕ್ಷದಲ್ಲಿ ಬಂಡಾಯ ಬಾವುಟ ಹಾರಿಸಿರುವುದು ಬೇರಾರೂ ಅಲ್ಲ. ಸ್ವತಃ ಈಶ್ವರಪ್ಪ ಅವರ ಸೋದರ ಕೆ.ಎಸ್. ಗಂಗಾಧರಪ್ಪ.

ಗಂಗಾಧರಪ್ಪ ಪಕ್ಷದ ವರಿಷ್ಠರ ವಿರುದ್ಧವೇ ತಿರುಗಿ ಬಿದ್ದಿದ್ದು, ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸು ಪಡೆದಿದ್ದಾರೆ. ಪಕ್ಷದ ಮುಖಂಡರ ಸಲಹೆಯಂತೆ ಗಂಗಾಧರಪ್ಪ ನ. 17ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಏಕಾಏಕಿ ತಮ್ಮ ನಿರ್ಧಾರವನ್ನು ಬದಲಿಸಿರುವುದು ಪಕ್ಷದ ಮುಖಂಡರಲ್ಲಿ ಆಶ್ಚರ್ಯ ಮೂಡಿಸಿದೆ. ಅದರಲ್ಲಿಯೂ ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪರಿಗೆ ಸಹೋದರನ ಈ ನಡೆಯಿಂದ ತೀವ್ರ ಮುಜುಗರ ಅನುಭವಿಸುವಂತಾಗಿದೆ.

ತಮಗೆ ರಾಜೀನಾಮೆ ನೀಡುವ ಯಾವುದೇ ಉದ್ದೇಶವಿರಲಿಲ್ಲ. ಆದರೆ ಕೆಲ ಬಿಜೆಪಿ ಮುಖಂಡರು ತಮ್ಮಿಂದ ಬಲವಂತವಾಗಿ ರಾಜೀನಾಮೆ ಕೊಡಿಸಿದರು. ಒಂದು ರೀತಿಯ ಹಿಂಸೆ ನೀಡಿದರು ಎಂದು ಗಂಗಾಧರಪ್ಪ ಆಪಾದಿಸಿದ್ದಾರೆ. ಆ ಮುಖಂಡರ ಹೆಸರನ್ನು ಈಗ ಹೇಳುವುದಿಲ್ಲ. ಸಮಯ ಬಂದಾಗ ಬಹಿರಂಗ ಪಡಿಸುತ್ತೇನೆ ಎಂದೂ ಗಂಗಾಧರಪ್ಪ ಹೇಳಿದ್ದಾರೆ.

ತಮ್ಮ ಅಧಿಕಾರಾವಧಿಯಲ್ಲಿ ನಗರದಲ್ಲಿ ಉತ್ತಮ ಕೆಲಸವಾಗಿದೆ. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಗರದ ರಸ್ತೆಗಳ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ. ಪ್ರಸ್ತುತ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ನಡೆಯುತ್ತಿದೆ. ಈ ಹಂತದಲ್ಲಿ ತಾವು ರಾಜೀನಾಮೆ ನೀಡಿದರೇ ಸರಿಯಾಗುವುದಿಲ್ಲ ಎಂದು ರಾಜೀನಾಮೆ ವಾಪಸ್ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡರು.

ಯಾರೂ ನನ್ನನ್ನೂ ಕೆಳಗೆ ಇಳಿಸಲು ಸಾಧ್ಯವಿಲ್ಲ ಎಂದ ಅವರು, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಹೋದರ ಕೆ.ಎಸ್. ಈಶ್ವರಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದೀರಾ ಎಂಬ ಪ್ರಶ್ನೆಗೆ, ಯಡಿಯೂರಪ್ಪರನ್ನು ಭೇಟಿ ಮಾಡಲು ಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ತಮ್ಮ ಸಹೋದರ ಈಶ್ವರಪ್ಪರೊಂದಿಗೆ ಇದುವರೆಗೂ ಯಾವುದೇ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

English summary
KS Eshwarappa brother Gangadharappa rebells in Shivamogga BJP. KS Gangadharappa has withdrawn resignation given to Shivamogga Corporation presidentship much to the opposition of party decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X