ದೇವರಚಿಕ್ಕನಹಳ್ಳಿಯಲ್ಲಿ 6 ತಿಂಗಳ ಬಸುರಿ ನೇಣಿಗೆ

ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎಚ್ಎಸ್ ಲೀಲಾವತಿ (21) ಭೋಗ್ಯಕ್ಕೆ ಪಡೆದಿದ್ದ ಫ್ಲ್ಯಾಟ್ ನಲ್ಲಿ ನೇಣು ಹಾಕಿಕೊಂಡಿದ್ದಾಳೆ. ಮತ್ತೊಂದು ಗಾರ್ಮೆಂಟ್ ಕಂಪನಿಯಲ್ಲಿ ಕೆಲಸದಲ್ಲಿದ್ದ ಕುಡುಕ ಗಂಡ ಮಂಜುನಾಥ(24)ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ : ಮದುವೆಯಾಗುವ ಮೊದಲೇ ಮಂಜುನಾಥ ಮತ್ತೊಬ್ಬಳನ್ನು ಪ್ರೇಮಿಸುತ್ತಿದ್ದ, ಮನೆಗೂ ಕರೆತರುತ್ತಿದ್ದ. ನಂತರ ಆತನ ಮನವೊಲಿಸಿ ಲೀಲಾವತಿ ಜೊತೆ ಮದುವೆ ಮಾಡಲಾಗಿತ್ತು. ಮದುವೆಯಲ್ಲಿ ಬಂಗಾರದ ಸರ ಮತ್ತು ಕೈಗಡಿಯಾರ ವರದಕ್ಷಿಣೆಯಾಗಿ ನೀಡಲಾಗಿತ್ತು.
ಲೀಲಾವತಿ ತಂದೆಯೇ ಮಂಜುನಾಥನಿಗೆ ಮನೆಯನ್ನು ಲೀಸಿಗೆ ಹಾಕಿಸಿ ಕೊಟ್ಟಿದ್ದರು. ಎಲ್ಲ ಅನುಕೂಲ ಮಾಡಿಕೊಟ್ಟಿದ್ದರೂ ಅವರ ಜೀವನ ಸುಸೂತ್ರವಾಗಿರಲಿಲ್ಲ. ಕಾರಿಗಾಗಿ ಮಂಜುನಾಥ ಬೇಡಿಕೆಯಿಟ್ಟಿದ್ದ. ಇದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಭಾರೀ ಜಗಳಗಳಾಗುತ್ತಿದ್ದವು.
ವರದಕ್ಷಿಣೆ ಬೇಡಿಕೆಗಿಂತ ತನ್ನ ಹಳೆ ಪ್ರೇಯಸಿಯನ್ನು ಮನೆಗೆ ಗಂಡ ಕರೆತರುತ್ತಿದ್ದುದು ಲೀಲಾವತಿಗೆ ಬೇಸರ ತರಿಸುತ್ತಿತ್ತು. ಪ್ರೇಯಸಿಯನ್ನು 'ಅಕ್ಕ' ಅನ್ನುವಂತೆ ಮತ್ತು ಆಕೆಯನ್ನು ಮನೆಯಲ್ಲಿರಲು ಒಪ್ಪುವಂತೆ ಮಂಜುನಾಥ ಪೀಡಿಸುತ್ತಿದ್ದ. ಭಾನುವಾರ ರಾತ್ರಿ ಕೂಡ ಇಬ್ಬರ ನಡುವೆ ಜಗಳವಾಗಿದೆ.
ರಾತ್ರಿ 3 ಗಂಟೆಯ ಸುಮಾರಿಗೆ ಮಂಜುನಾಥ ತನ್ನ ರೂಮಿಗೆ ತೆರಳಿ ನಿದ್ದೆಗೆ ಜಾರಿದ್ದಾನೆ. 3.30ರ ಸುಮಾರಿಗೆ ಹೆಂಡತಿ ಲೀಲಾವತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ಮಂಜುನಾಥನ ಮೇಲೆ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications