ಲೋಕಾಯುಕ್ತ ನೇಮಕ ವಿಳಂಬ: ಸದಾನಂದಗೆ ಭಾರದ್ವಾಜ್ ಛೀಮಾರಿ

'ಹೊಸ ಲೋಕಾಯುಕ್ತರ ನೇಮಕಾತಿಗಾಗಿ ಸರ್ಕಾರ ಕಷ್ಟಪಡಬೇಕಾದ ಅಗತ್ಯವಿಲ್ಲ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟಿನ ಅಂತರ್ಜಾಲದಲ್ಲಿ ಹುಡುಕಿದರೂ ಲೋಕಾಯುಕ್ತಕ್ಕೆ ಅರ್ಹರಾದ ನ್ಯಾಯಮೂರ್ತಿಗಳ ಹೆಸರು ಸಾಕಷ್ಟು ಸಿಗುತ್ತದೆ. ಅರ್ಹ ಲೋಕಾಯುಕ್ತರ ನೇಮಕ ಬಹಳ ಸರಳ' ಎಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಅವರು ನಂತರ ಸುದ್ದಿಗಾರರ ಜತೆ ಮಾತನಾಡಿ, ಲೋಕಾಯುಕ್ತ ಸಂಸ್ಥೆಗೆ ತನ್ನದೇ ಆದ ವೈಶಿಷ್ಯತೆ ಇದೆ. ಇಂತಹ ಸಂಸ್ಥೆಗೆ ಉತ್ತಮ ನಡತೆ ಉಳ್ಳವರು ಬರಬೇಕೆಂಬುದು ನನ್ನ ಅಪೇಕ್ಷೆ ಎಂದು ಹೇಳಿದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ತಮ್ಮ ಅಧಿಕಾರಾವಧಿಯಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಜನತೆ ಸಹ ಅವರ ಕೆಲಸ-ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಈಗ ರಾಜಕಾರಣಿಗಳು ಅವರ ವಿರುದ್ಧ ವಿನಾಕಾರಣ ಟೀಕಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಖಂಡಿಸಿದರು.
ನ್ಯಾಯ ದೇಗುಲದಂತಿರುವ ಈ ಸಂಸ್ಥೆಗೆ ಉತ್ತಮ ನಡವಳಿಕೆ ಇರುವವರು ಬಂದರೆ, ಇದರ ಕೀರ್ತಿ ಮತ್ತು ಗೌರವ ಮತ್ತಷ್ಟು ಹೆಚ್ಚುತ್ತದೆ. ಅಲ್ಲದೇ, ಇದರ ಸಿದ್ಧಾಂತವನ್ನು ಎತ್ತಿ ಹಿಡಿಯುವಂಥ ಅರ್ಹತೆ ಇರುವ ನ್ಯಾಯಮೂರ್ತಿಗಳು ಬಂದರೆ ಸಂಸ್ಥೆಯೂ ಬೆಳೆಯುತ್ತದೆ ಎನ್ನುವುದೇ ನನ್ನ ಉದ್ದೇಶ ಎಂದು ಹೇಳಿದರು.












Click it and Unblock the Notifications