ಮಕ್ಕಳು ಜೈಲು ಸೇರಲು ಹಿಂಜರಿಯುವುದಿಲ್ಲ : ದೇವೇಗೌಡ

ಶನಿವಾರ ಜೆಡಿಎಸ್ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ಲೋಕಾಯುಕ್ತ ಮಾಜಿ ಎಡಿಜಿಪಿ ಜೀವನ್ ಕುಮಾರ್ ಗಾಂವ್ಕರ್ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ್ದನ್ನು ಒಪ್ಪಿಕೊಂಡರು. ಆದರೆ, ಅವರನ್ನು ಬೆದರಿಸಿದ್ದನ್ನು ಸಾರಾಸಗಟಾಗಿ ನಿರಾಕರಿಸಿದರು.
ಗಾಂವ್ಕರ್ ಅವರೊಂದಿಗೆ ಮಾತನಾಡಿ, ಅವರ ಕೆಳಗಿನ ಅಧಿಕಾರಿಗಳು ಸರಿಯಾಗಿ ತನಿಖೆ ಮಾಡುತ್ತಿಲ್ಲ. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಪ್ರಕರಣವನ್ನು ಒಂದು ರೀತಿ, ತಮ್ಮ ಮಕ್ಕಳ ಪ್ರಕರಣಗಳನ್ನು ಇನ್ನೊಂದು ರೀತಿಯಲ್ಲಿ ತನಿಖೆ ಮಾಡುತ್ತಿದ್ದಾರೆ. ಅಲ್ಲದೆ, ಒತ್ತಡಕ್ಕೊಳಗಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಗೌಡರ ಕುಟುಂಬ ತನಿಖೆಗೆ ಮತ್ತು ಕಾನೂನಿಗೆ ಈಗಲೂ ಬದ್ಧವಾಗಿದೆ. ಹಾಗೆಯೆ ತನಿಖಾ ತಂಡಗಳು ಕೂಡ ತನಿಖೆಯ ಮಾನದಂಡವನ್ನು ಶಿರಸಾವಹಿಸಿ ಪಾಲಿಸಬೇಕು. ಬಾಲಕೃಷ್ಣ ಮತ್ತು ಕುಮಾರಸ್ವಾಮಿ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದೇ ಆದಲ್ಲಿ ಜೈಲು ಸೇರಲು ಹಿಂಜರಿಯುವುದಿಲ್ಲ ಎಂದು ನಿರ್ಭಾವುಕರಾಗಿ ನುಡಿದರು.
ಅಕ್ರಮ ಆಸ್ತಿ ಗಳಿಸಿದ್ದಾರೆಂದು ಆರೋಪದ ಮೇಲೆ ದೇವೇಗೌಡರ ಹಿರಿಯ ಮಗ ಎಚ್ ಡಿ ಬಾಲಕೃಷ್ಣೇ ಗೌಡರ ವಿರುದ್ಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳನ್ನು ಬೆದರಿಸುತ್ತಿರುವ ಗೌಡರು ಮತ್ತು ಮಕ್ಕಳ ವಿರುದ್ದ ಲೋಕಾಯುಕ್ತ ನ್ಯಾಯಾಲಯ ಮೊಕದ್ದಮೆ ದಾಖಲಿಸಬೇಕು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಬಿಜೆ ಪುಟ್ಟಸ್ವಾಮಿ, ಸಚಿವ ರೇಣುಕಾಚಾರ್ಯ ಆಗ್ರಹಿಸಿದ್ದರು.












Click it and Unblock the Notifications