ನಾ ಇಟ್ಟರೆ ಶಾಪ, ಕೊಟ್ಟರೇ ವರ-ದೇವೇಗೌಡ

ರಾಜಕೀಯ ಒಂದು ವ್ಯಾಪಾರ. ವ್ಯಾಪಾರಂ ದ್ರೋಹ ಚಿಂತನಂ ಲೋಕೋಕ್ತಿ ರಾಜಕೀಯಕ್ಕೂ ಸಲ್ಲುತ್ತದೆ. ಹಾಗಾಗಿ ನಮ್ಮ ದೊಡ್ಡೇಗೌಡರು ಕಳೆದ 50 ವರ್ಷದಿಂದ ನಮ್ಮ ನಡುವಿನ ಯಶಸ್ವಿ ರಾಜಕಾರಣಿಯಾಗಿ ಮೆರೆಯುತ್ತಿದ್ದಾರೆ. ಅವರಿಗೆ ನನ್ನ ಶುಭಾಶಯಗಳು.
ಬರೀ ರಾಜ್ಯಕ್ಕೇ ಏಕೆ ಇಡೀ ನಾಡಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಗೌಡರ ಸಾಧನೆಗಳನ್ನು ನನ್ನ ಪುಟ್ಟ ಬರಹದಲ್ಲಿ ಹಿಡಿದಿಡುವುದು ಕಷ್ಟ. ಮುಖ್ಯವಾಗಿ ಕರ್ನಾಟಕದ ರೈತಾಪಿ ಜನದ ಪಕ್ಷಪಾತಿಯಾಗಿ ಅವರು ದುಡಿದಿದ್ದಾರೆ ಎನ್ನುವುದು ಪ್ರಪಂಚಕ್ಕೇ ಗೊತ್ತು.
ಆಗಲೇ ಹೇಳಿದಂತೆ ರಾಜಕೀಯ ಒಂದು ದೊಡ್ಡ ವ್ಯಾಪಾರ. ನಮ್ಮ ದೊಡ್ಡೇಗೌಡರು ಈ ವ್ಯಾಪಾರ ವಹಿವಾಟನ್ನು ಅತ್ಯಂತ ಚಾಕಚಕ್ಯತೆಯಿಂದ ಮಾಡಿಕೊಂಡು ಬಂದಿದ್ದಾರೆ. ದೇವೇಗೌಡರು ಹಾಸನದ ಮದಿಸಿದ ಆನೆ. ಅಡ್ಡ ಬಂದವರನ್ನು ಎತ್ತಿ ಬಿಸಾಕದೆ ಸುಮ್ಮನೆ ಹೋಗುವಂಥವರಲ್ಲ.
ಜನತಾ ಪರಿವಾರವನ್ನು ಹಸಿಸೌದೆ ಥರ ಸೀಳಿಸೀಳಿ ಹಾಕಿದವರು ಅವರು. ರಾಮಕೃಷ್ಣ ಹೆಗಡೆಯಿಂದ ಸಿದ್ದರಾಮಯ್ಯನವರೆಗೆ, ಬಚ್ಚೇಗೌಡರಿಂದ ಪಿಜಿಆರ್ ಸಿಂಧ್ಯಾ ವರೆಗೆ ತಮ್ಮ ವಿರುದ್ದ ಸೊಲ್ಲೆತ್ತಿದ್ದವರನ್ನು ನುಂಗಿ ಹೇಮಾವತಿ ನದಿ ನೀರಿನಲ್ಲಿ ಆಪೋಷನ ತೆಗೆದುಕೊಂಡ ಛಲಗಾರರು ನಮ್ಮ ಗೌಡರು. ನಾಗರಹಾವು ಚಿತ್ರದ ಹಾಡು "ನಾ ಇಟ್ಟರೆ ಶಾಪ, ಕೊಟ್ಟರೆ ವರ" ನೆನಪಾಗ್ತದೆ.












Click it and Unblock the Notifications