ರಕ್ತದ ಕಣಕಣದಲ್ಲೂ ರಾಜಕೀಯ; ಭಲೇ ಗೌಡ್ರೆ

ಕುಟುಂಬಕ್ಕೆ ಅಥವಾ ಪಕ್ಷಕ್ಕೆ ಲಾಭವಿಲ್ಲದೆ ಯಾವ ಕೆಲಸವನ್ನು ಗೌಡ್ರು ಮಾಡಿದ ಉದಾಹರಣೆ ಕಮ್ಮಿ. ಹೋದವಾರ ನೈಸ್ ವಿರೋಧಿ ಹೋರಾಟಗಾರನ ಹತ್ಯೆಯ ವಿರುದ್ದ ಅವರು ನಡೆಸಿದ ಪಾದಯಾತ್ರೆ ಪೋಲೀಸ್ ಇಲಾಖೆ ಅಲ್ಲದೆ ಸಿಎಂ ಕಚೇರಿಗೆ ಭಯ ಮುಟ್ಟಿಸಿತ್ತು.
ಇನ್ನು ತಮ್ಮ ಪುತ್ರರತ್ನ ಕುಮಾರಸ್ವಾಮಿ ಮತ್ತು ಸೊಸೆ ಅನಿತಾ ಕುಮಾರಸ್ವಾಮಿ ಇನ್ನೇನು ಬಂಧನಕ್ಕೆ ಒಳಗಾಗುತ್ತಾರೆ ಎನ್ನುವಷ್ಟರಲ್ಲೇ ಅರ್ಜಿದಾರನಿಗೇ ಕೋರ್ಟ್ ಛೀಮಾರಿ ಮತ್ತು ದಂಡ ಹಾಕಿ ಕಳುಹಿಸುವಂತೆ ಆಶೀರ್ವದಿಸಿದ ದೇವೇಗೌಡರ ತಂತ್ರಗಾರಿಕೆಗೆ ಮತ್ತೊಮ್ಮೆ ಹ್ಯಾಟ್ಸ್ ಆಫ್.
ಕೆಎಂಎಫ್ ನಲ್ಲಿ ರೇವಣ್ಣ ವಿರುದ್ದ ಕೇಸ್ ಒಂದೇ ಎರಡೇ? ರೆಡ್ಡಿಗಳು ಎಷ್ಟೇ ಹಾರಾಡಿದರೂ, ಯಡಿಯೂರಪ್ಪ ಎಷ್ಟೇ ಕೂಗಾಡಿದರೂ ಗೌಡ್ರ ಕುಟುಂಬದ ಏನೇ ಅಕ್ರಮ ಇದ್ದರೂ ಅದು ಸಾರ್ವಜನಿಕವಾಗಿ ಬಯಲಾಯಿತೇ? ನನನ. ಅಧಿಕಾರಕ್ಕೆ ಬಂದ ದಿನದಿಂದ ಗೌಡ್ರ ಕುಟುಂಬದ ಅಕ್ರಮಗಳನ್ನು ಬಯಲು ಮಾಡುತ್ತೇನೆ ಎಂದು ಬಡಬಡಿಸುತ್ತಿದ್ದ ಯಡಿಯೂರಪ್ಪ ತಾವೇ ಜೈಲು ದರ್ಶನ ಮಾಡಿ ಬಂದರೆ ವಿನಃ ಗೌಡರ ಟವಲ್ಲಿನ ಒಂದು ನೆರಿಗೆಯನ್ನು ಸುಕ್ಕು ಮಾಡಲಾಗಲಿಲ್ಲ.
ತೀರಾ ಇತ್ತೀಚಿನ ಉದಾಹರಣೆ ನೀಡ ಬಹುದಾದರೆ, ಬಳ್ಳಾರಿ ಗ್ರಾಮಾಂತರ ಚುನಾವಣಾ ಕಣದಿಂದ ಗೌಡ್ರು ಹಿಂದೆ ಸರಿದು ಶ್ರೀರಾಮುಲು ಅವರಿಗೆ ಬೆಂಬಲ ಸೂಚಿಸಿದ್ದು. ಜೆಡಿಎಸ್ ಅಭ್ಯರ್ಥಿ ಕ್ಷೇತ್ರದಲ್ಲಿ ನಿಂತಿದ್ದರೆ ಅಷ್ಟೇನೂ ವ್ಯತ್ಯಾಸ ಆಗದಿದ್ದರೂ ಪಕ್ಷದ ಅಭ್ಯರ್ಥಿಯನ್ನೇ ಕಣಕ್ಕಿಳಿಸದೆ ರಾಮುಲುಗೆ ಬೆಂಬಲ ಸೂಚಿಸಿರುವುದರ ಹಿಂದೆ ಗೌಡ್ರ ಮುಂದಿನ ನಡೆ ಮಾತ್ರ ರಾಷ್ಟ್ರೀಯ ಪಕ್ಷಗಳು ಚಿಂತಿಸುವಂತೆ ಮಾಡಿದೆ.
ಇತ್ತ ಈ ಮರುಚುನಾವಣೆ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಅತ್ತ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ರಾಷ್ಟ್ರೀಯ ಪಕ್ಷವಾಗಿ ಅವಮಾನ, ಅಭ್ಯರ್ಥಿ ನಿಲ್ಲಿಸಿದರೆ ಬಳ್ಳಾರಿ, ಗದಗ, ರಾಯಚೂರು ಜಿಲ್ಲೆಯಲ್ಲಿ ಬಿಜೆಪಿ ಇಬ್ಭಾಗವಾಗುವ ಸಾಧ್ಯತೆ. ಇದನ್ನೆಲ್ಲಾ ಅರಿತಿರುವ ಮುಕ್ಕಣ್ಣ ಗೌಡ್ರು ತಮ್ಮ ಮುಂದಿನ ಹೆಜ್ಜೆಯನ್ನು ಯಾವ ರೀತಿ ಇಡುತ್ತಾರೆ ಎನ್ನುವುದು ಕುತೂಹಲಕಾರಿ.
ದೇವೇಗೌಡರ ಚಾಣಾಕ್ಷ ರಾಜಕಾರಣವನ್ನು ಕಾಮರಾಜ್, ಪಿ.ವಿ.ನರಸಿಂಹರಾವ್, ಕರುಣಾನಿಧಿಗೆ ಹೋಲಿಸುವುದುಂಟು. ಇಂತಹ ಚಾಣಾಕ್ಷ ರಾಜಕಾರಿಣಿ ಮಣ್ಣಿನಮಗ ದೇವೇಗೌಡರನ್ನು ಪಡೆದ ಕನ್ನಡಿಗರಾದ ನಾವೇ ಧನ್ಯರು. ದೇವೇಗೌಡರ ವಯಸ್ಸು ಎಷ್ಟು ಎನ್ನುವುದು ನನಗೆ ಕರಾರುವಾಕ್ಕಾಗಿ ತಿಳಿದಿಲ್ಲ. ಹತ್ತಿರ ಹತ್ತಿರ 80 ಆಗಿರಬಹುದು. ಆದರೆ ಅವರ ಜನ್ಮ ದಿನಾಂಕವನ್ನು (18 ಮೇ) ನಾನೆಂದೂ ಮರೆಯುವುದಿಲ್ಲ.












Click it and Unblock the Notifications