ಜೈಲಿನಲ್ಲಿ ಜನಸಾಗರ, ಕೈದಿಗಳಿಂದ ಬಿಎಸ್ವೈ ಗೆ ಸನ್ಮಾನ

ಈ ಮಧ್ಯೆ ಯಡಿಯೂರಪ್ಪ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಉಚ್ಚ ನ್ಯಾಯಾಲಯ ಮಂಗಳವಾರ ನಿರೀಕ್ಷಣಾ ಜಾಮೀನು ನೀಡಿದೆಯಾದರೂ ಅವರು ಇನ್ನೂ ಆರೋಪ ಮುಕ್ತರಾಗಿಲ್ಲ. ಸಂಭ್ರಮಾಚರಣೆ ತಪ್ಪು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಾ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ತಮ್ಮ ತಮ್ಮ ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲು ನೆರವಾಗಿ ಎಂದು ಕೈದಿಗಳು ಬಿಎಸ್ವೈ ಅವರನ್ನು ಬೇಡಿ ಕೊಂಡಿದ್ದಾರೆ. ಪರಪ್ಪನ ಅಗ್ರಹಾರದ ಬಳಿ ಶಾಸಕ ಸತೀಶ್ ರೆಡ್ಡಿ, ನಂದೀಶ್ ರೆಡ್ಡಿ, ತುಮಕೂರು ಸಂಸದ ಬಸವರಾಜ್, ಸಚಿವರುಗಳಾದ ನಿರಾಣಿ, ರೇಣುಕಾಚಾರ್ಯ ಅವರಿದ್ದು ಇನ್ನೂ ಕೆಲ ಸಚಿವರು, ಶಾಸಕರು ಅವರನ್ನು ಕೂಡಿ ಕೊಳ್ಳುವ ಸಾಧ್ಯತೆ ಇದೆ.
ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಅಭಿಮಾನಿಗಳನ್ನು ನಿಯಂತ್ರಿಸಲು ಪೋಲೀಸರು ಹರ ಸಾಹಸ ಪಡುತ್ತಿದ್ದಾರೆ. ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲದಂತಾಗಿದ್ದು ಪಟಾಕಿ ಹೊಡೆದು ವಿಜಯೋತ್ಸವ ಆಚರಿಸುತ್ತಿದ್ದಾರೆ. ರಾಜ್ಯದೆಲ್ಲಡೆ ಬಿಜೆಪಿ ಅಭಿಮಾನಿಗಳು ಸಂಭ್ರಮ ಆಚರಿಸಿ ಕೊಳ್ಳುತ್ತಿರುವ ಬಗ್ಗೆ ವರದಿಗಳು ಬಂದುಬೀಳುತ್ತಿವೆ.
ಯಡಿಯೂರಪ್ಪ ಬಿಡುಗಡೆ ನಂತರ ಮುಂದೇನು ಎಂಬ ಕುತೂಹಲ ರಾಜ್ಯ ರಾಜಕೀಯದಲ್ಲಿ ಮನೆ ಮಾಡಿದೆ. ಸದಾನಂದರ ಆನಂದಕ್ಕೆ ಧಕ್ಕೆ ಉಂಟಾಗುವುದೇ, ಬಿಜೆಪಿ ಪಾಳಯದಲ್ಲಿ ಮತ್ತೆ ರಂಪಾಟ ಉಂಟಾಗುವುದೇ, ಹೈಮಾಂಡ್ ಏನು ತಾನೇ ಮಾಡುತ್ತದೆ ಎನ್ನುವುದನ್ನು ಕಾರ್ಯಕರ್ತರಲ್ಲದೆ ಜನಸಾಮಾನ್ಯರು ಆಸಕ್ತಿಯಿಂದ ಎದುರು ನೋಡುತ್ತಿದ್ದಾರೆ.












Click it and Unblock the Notifications