ಮೈಸೂರಿನಲ್ಲಿ ಪೊಲೀಸ್ ಪೇದೆ ಮೇಲೆ ಚಿರತೆ ದಾಳಿ

ಮೈಸೂರಿನ ವಿಜಯನಗರ 4ನೇ ಹಂತದ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಕುರುಚಲು ಗಿಡಗಳ ಪೊದೆಯಲ್ಲಿ ಅವಿತುಕೊಂಡಿದ್ದ ಚಿರತೆ ಛಂಗನೆ ಹಾರಿ ಓಡುತ್ತಿದ್ದುದನ್ನು, ನಾಯಿ ಹಿಡಿದುಕೊಂಡು ವಾಕಿಂಗ್‌ಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರು ನೋಡಿದ್ದರು. ಕೂಡಲೇ ಅವರು ಸ್ಥಳೀಯರಿಗೆ ತಿಳಿಸಿದ್ದರು. ಇದರಿಂದ ಭಯಗೊಂಡ ಜನರು ಚಿರತೆಗಾಗಿ ಹುಡುಕಾಡಿದರಲ್ಲದೆ, ವಿಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳು ಚಿರತೆಯನ್ನು ಹಿಡಿಯಲು ಹುಡುಕಾಟ ಆರಂಭಿಸಿದರು. ಈ ಸಂದರ್ಭ ವಿದ್ಯಾರಣ್ಯಪುರಂ ನಿವಾಸಿ ಪೊಲೀಸ್ ಪೇದೆಯಾಗಿರುವ ಚೆಲುವರಾಜು ಎಂಬುವರು ಪೊದೆಯೊಂದರ ಬಳಿ ಗಿಡಗಳನ್ನು ಸರಿಸಿ ಹುಡುಕಾಡುತ್ತಿದ್ದಾಗ ದಿಢೀರ್ ಆಗಿ ಅವರ ಮೇಲೆ ಚಿರತೆ ಎರಗಿದೆ. ಈ ಸಂದರ್ಭ ಅದನ್ನು ತಮ್ಮ ಕೈಯ್ಯಿಂದ ಕೆಳಕ್ಕೆ ತಳ್ಳಿ ಹಾಕಿದಾಗ ಅದು ಅವರ ತೊಡೆಗೆ ಕಚ್ಚಿದೆ. ತಕ್ಷಣ ಜೊತೆಯಲ್ಲಿದ್ದವರು ಕೂಗುತ್ತಾ ಅವರ ಬಳಿಗೆ ಬಂದಾಗ ಹೆದರಿದ ಚಿರತೆ ಅವರನ್ನು ಬಿಟ್ಟು ಮತ್ತೆ ಪೊದೆ ಸೇರಿಕೊಂಡಿದೆ. ಗಾಯಾಳು ಚೆಲುವರಾಜು ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗ್ಗಿನಿಂದಲೇ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಚಿರತೆ ಯಾವ ಪೊದೆಯಲ್ಲಿ ಅಡಗಿ ಕುಳಿತಿದೆ ಎಂಬುವುದು ಮಾತ್ರ ಗೊತ್ತಾಗಿಲ್ಲ. ಹೀಗಾಗಿ ಬೋನ್‌ಗಳನ್ನಿಟ್ಟಿರುವ ಸಿಬ್ಬಂದಿ ಚಿರತೆಗಾಗಿ ಕಾಯುತ್ತಿದ್ದಾರೆ. ಆದರೆ ಚಿರತೆ ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ನಿವಾಸಿಗಳು ಆತಂಕದಲ್ಲಿದ್ದಾರೆ.












Click it and Unblock the Notifications