ಜೈ ಹೋ ಮೈಲಾರ್ಡ್ ನ್ಯಾ.ಸುಧೀಂದ್ರರಾವ್ !

ಭ್ರಷ್ಟಾಚಾರದ ವಿರುದ್ಧ ಜನಚೇತನಾ ಯಾತ್ರೆಯನ್ನೇ ಹಮ್ಮಿಕೊಂಡಿರುವ ಅಡ್ವಾಣಿ ಬಸವನಗುಡಿಗೆ ಇನ್ನೇನು ಕೆಲವೇ ಹೆಜ್ಜೆಗಳು ದೂರವಿರುವಾಗ ಅವರ ಪಕ್ಷದವರಿಗೆ ಎಂತಾ ಸಂಪನ್ನ ಗಿಫ್ಟ್ ಕೊಟ್ಟಿರಿ. ನೋಡೋಣ! ಅಡ್ವಾಣಿ ಅವರದು ನಿಜಕ್ಕೂ ಭ್ರಷ್ಟಾಚಾರದ ವಿರುದ್ಧವೇ ರಥಯಾತ್ರೆಯಾಗಿದ್ದರೆ ಬಸವನಗುಡಿ ಸಭೆಯಲ್ಲಿ ನಿಮಗೊಂದು ಶಹಭಾಸ್ ಗಿರಿ ಕೊಡುತ್ತಾರೇನೋ ಮೈಯೆಲ್ಲ ಕಿವಿಯಾಗಿ ಕೇಳಿಸಿಕೊಳ್ಳಲು ನಾವು ಕಾತುರರಾಗಿದ್ದೇವೆ.
ಅದೆಲ್ಲ ಒತ್ತಟ್ಟಿಗಿರಲಿ ಇದೇನಿದು ಭ್ರಷ್ಟಾಚಾರದ ವಿರುದ್ಧ ನಿಮ್ಮದು ಈ ಪರಿ ಸೌಮ್ಯ ಹೋರಾಟ. ಭ್ರಷ್ಟ ವ್ಯವಸ್ಥೆಯಲ್ಲಿ ಜನಸಾಮಾನ್ಯ ಹತಾಶನಾಗಿ ಮೈಮುದುಡಿಕೊಂಡು ಕುಳಿತಿದ್ದಾಗ ನೀವೇನು ಧಿಗ್ಗನೆ ಎದ್ದು ಕುಳಿತಿದ್ದೀರಿ. ರಾಗ ದ್ವೇಷಗಳಿಲ್ಲದೆ, ಕಾನೂನು ಮಂತ್ರವನ್ನು ಜಪಿಸುತ್ತಿದ್ದೀರಿ. ದೇಶದಲ್ಲೇ ಮೊದಲ ಬಾರಿಗೆ ಖಾಸಗಿ ದೂರನ್ನು ಆಲಿಸಿ, ನಾಡಿನ ದೊರೆಯೇ ಆರೋಪಿ ಎಂಬುದನ್ನೂ ಲೆಕ್ಕಿಸದೆ ನ್ಯಾಯದ ಬಂಧನಕ್ಕೆ ಒಪ್ಪಿಸಿದಿರಿ.
ಇವರೆಲ್ಲ ಬರೀ ಆರೋಪಿಗಳೋ ಅಥವಾ ಮುಂದೆ ನಿಮ್ಮೆದುರೇ ಅಪರಾಧಿಗಳೂ ಸಹ ಎಂದು ಸಾಬೀತಾಗುತ್ತಾರೋ ಆ ಮಾತು ಬೇರೆ. ಆದರೆ ಸದ್ಯಕ್ಕಂತೂ ಅವರನ್ನೆಲ್ಲ ಜೈಲಿಗದುಮಿರುವುದನ್ನು ನೋಡಿ ಖಂಡಿತಾ ಪ್ರಜ್ಞಾವಂತ ಜನ ನಿಮಗೊಂದು ಸಲಾಂ ಹೇಳೋ ಹುಕಿಗೆ ಬಿದ್ದಿದ್ದಾನೆ. ಪ್ಲೀಸ್ ಅಕ್ಸಪ್ಟ್!












Click it and Unblock the Notifications