ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ : ಗಡ್ಕರಿ ಭವಿಷ್ಯ

ಈ ಭವಿಷ್ಯವನ್ನು ನುಡಿದಿರುವುದು ಯಾವುದೋ ಜ್ಯೋತಿಷಿಯಲ್ಲ. ರಾಷ್ಟ್ರಮಟ್ಟದಲ್ಲಿ ಭಾರತೀಯ ಜನತಾ ಪಕ್ಷದ ಚುಕ್ಕಾಣಿ ಹಿಡಿದಿರುವ ನಿತೀನ್ ಗಡ್ಕರಿಯವರು. ಸಿಎನ್ಎನ್-ಐಬಿಎನ್ ಚಾನಲ್ಲಿಗಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕೀಯ ನಿರ್ದೇಶಕರಾಗಿರುವ ಪ್ರಭು ಚಾವ್ಲಾ ಅವರು ನಡೆಸಿರುವ ಸಂದರ್ಶನದಲ್ಲಿ ಮೇಲಿನಂತೆ ಭವಿಷ್ಯ ನುಡಿದಿದ್ದಾರೆ.
ಯಡಿಯೂರಪ್ಪನವರ ರಾಜಕೀಯ ನಡೆಗಳ ಬಗ್ಗೆ ಎಲ್ಲಡೆಗಳಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾದಂಥ ಸಂದರ್ಭದಲ್ಲಿ 'ಆಪದ್ಬಾಂಧವ' ನಿತೀನ್ ಗಡ್ಕರಿ ಮಾತ್ರ, ಯಡಿಯೂರಪ್ಪ ಅವರ ವಿರುದ್ಧ ಆರೋಪ ಮಾತ್ರ ಹೊರಿಸಲಾಗಿದೆ, ಅವರು ಅಪರಾಧಿಯಲ್ಲ ಎಂದು ಅವರನ್ನು ಸಮರ್ಥಿಸುತ್ತಲೇ ಬಂದಿದ್ದರು.
ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನ ಟಾಯ್ಲೆಟ್ ನೀರನ್ನು ಹೊರತುಪಡಿಸಿ ಉಳಿದದ್ದಕ್ಕೆಲ್ಲ ಮಿನರಲ್ ನೀರನ್ನು ಬಳಸುತ್ತಿರುವ ಯಡಿಯೂರಪ್ಪನವರಿಗೆ ಈ ಭವಿಷ್ಯವನ್ನು ಕೇಳಿ ಸ್ವಲ್ಪವಾದರೂ ಮುಗುಳ್ನಗೆ ಬಂದೀತು. ಯಡಿಯೂರಪ್ಪ ಹುರುಪಿನಿಂದರಲು ಮತ್ತೊಂದು ಕಾರಣವೇನೆಂದರೆ, ಅವರನ್ನು ಜೈಲಿಗೆ ಕಳಿಸಲು ಕಾರಣರಾದ ಸಿರಾಜಿನ್ ಬಾಷಾ ವಿರುದ್ಧವೇ ಎಫ್ಐಆರ್ ದಾಖಲಿಸಲಾಗಿದೆ.
ಜೊತೆಗೆ, ಕೆಲ ದಿನಗಳ ಹಿಂದೆ ಯಡಿಯೂರಪ್ಪನವರಿಗೆ ರಾಜಯೋಗವಿದ್ದು, ಅವರು ಡಿಸೆಂಬರ್ ತಿಂಗಳಲ್ಲಿ ನಿರಪರಾಧಿಯಾಗಿ ಹೊರಬರಲಿದ್ದಾರೆ ಎಂದು ಖ್ಯಾತ ಜ್ಯೋತಿಷಿ ಕಾಳಿಚರಣ್ ಎಂಬುವವರು ಭವಿಷ್ಯ ನುಡಿದಿದ್ದರು. ಸದ್ಯಕ್ಕೆ ಗ್ರಹಗತಿಗಳು ದಿಕ್ಕುತಪ್ಪಿದ್ದರೂ, ಡಿಸೆಂಬರ್ ಹೊತ್ತಿಗೆ ಮತ್ತೆ ಯಡಿಯೂರಪ್ಪನವರಿಗೆ ಅನುಕೂಲವಾಗುವಂತೆ ಗ್ರಹಗಳು ದಾರಿಗೆ ಬರಲಿವೆ ಎಂದು ಅವರು ಹೇಳಿದ್ದರು.
ಅಧಿಕಾರ ಕಳೆದುಕೊಂಡ ಮರುದಿನ ಯಡಿಯೂರಪ್ಪನವರು ಅಧಿಕಾರಿಗಳೊಂದಿಗೆ ಮಾತನಾಡುತ್ತ, "ಸಿಕ್ಸ್ ಮಂತ್ಸಲ್ಲಿ ಮತ್ತೆ ಬರ್ತೀನ್ರಿ" ಎಂದು ತಮ್ಮ ಭವಿಷ್ಯವನ್ನು ತಾವೇ ನುಡಿದುಕೊಂಡಿದ್ದರು. ಅಸಲಿಗೆ ಯಡಿಯೂರಪ್ಪ ಅಧಿಕಾರ ಕಳೆದುಕೊಂಡೇ ಇಲ್ಲ, ಜೈಲಿನಲ್ಲಿದ್ದುಕೊಂಡೇ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಮುಂದೆ ಏನಾಗಲಿದೆ, ಬಲ್ಲವರಾರು?












Click it and Unblock the Notifications