ಯಡ್ಡಿ ಎಚ್ಡಿಕೆ ರಹಸ್ಯ ಭೇಟಿಯ ಹಿಂದಿನ ಉದ್ದೇಶವೇನು?

ಮಂಗಳವಾರ ಬೆಳಗ್ಗೆ 7ಗಂಟೆಗೆ ಭೇಟಿ ನಿಗದಿಯಾಗ ಬೇಕಿತ್ತು. ಆದರೆ ನಡೆದಾಡುವ ದೇವರು ಡಾ. ಸಿದ್ದಗಂಗಾ ಶ್ರೀಗಳು ಆಗಮಿಸುವ ಕಾರ್ಯಕ್ರಮ ಇದ್ದಿದ್ದರಿಂದ ಸಂಜೆ ಮೂರು ಗಂಟೆಗೆ ಸುಮಾರಿಗೆ ಆಗಮಿಸಿದ ಕುಮಾರಸ್ವಾಮಿ ಯಡಿಯೂರಪ್ಪ ಅವರ ಜೊತೆ 40 ನಿಮಿಷ ಮಾತು ಕತೆ ನಡೆಸಿದ್ದಾರೆ. ಈ ಭೇಟಿ ಎಷ್ಟು ರಹಸ್ಯವಾಗಿತ್ತೆಂದರೆ ಬಿಜೆಪಿ ಅಥವಾ ಜನತಾದಳದ ಯಾವುದೇ ನಾಯಕರನ್ನು ಒಳಗೆ ಸೇರಿಸಿರಲಿಲ್ಲ ಎನ್ನಲಾಗಿದೆ.
ಜೈಲು ಸೇರಿರುವ ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಸಾಂತ್ವನ ನೀಡಿದ್ದಾರೆಂದು ವರದಿಯಾಗಿದೆ. ರಾಜಕೀಯದಲ್ಲಿ ಇದೆಲ್ಲಾ ಮಾಮೂಲು, ನಾವೇನು ನಿಮ್ಮ ಶತ್ರುಗಳಲ್ಲ, ನಿಮ್ಮನ್ನು ಜೈಲಿಗೆ ಕಳುಹಿಸಬೇಕೆನ್ನುವ ಉದ್ದೇಶ ನಮಗಿರಲಿಲ್ಲ ಎಂದು ಖೇದದಿಂದ ಸ್ಪಷ್ಟ ಪಡಿಸಿದ್ದಾರೆಂದು ಕೂಡ ವರದಿಯಾಗಿದೆ. ಸಮ್ಮಿಶ್ರ ಸರಕಾರದಲ್ಲಿ ನಡೆದ ಹಗರಣಗಳನ್ನು ಕುಮಾರಸ್ವಾಮಿ ಕಡತ ಸಮೇತ ಮಾದ್ಯಮಗಳಿಗೆ ಬಿಡುಗಡೆ ಮಾಡಿದ್ದರು.
ಇಬ್ಬರು ಮಾಜಿಗಳ ಭೇಟಿ ಬಿಜೆಪಿ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ , ಅಲ್ಲದೆ ವರಿಷ್ಠರ ನಿದ್ದೆಗೆಡಿಸಿದೆ.












Click it and Unblock the Notifications