ಪರಪ್ಪನ ಅಗ್ರಹಾರದಲ್ಲೊಂದು ಮಿನಿ ಕ್ಯಾಬಿನೆಟ್!

ಭೂಗತ ಪಾತಕಿಗಳಿಗೆ, ಕ್ರಿಮಿನಲ್ ಗಳಿಗೆ ಹೆಚ್ಚಾಗಿ ಮೀಸಲಾಗಿದ್ದ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಅನುಭವ ರಾಜಕೀಯ ನಾಯಕರುಗಳಿಗೂ ವಿಸ್ತರಿಸಿದೆ. ನಟ ದರ್ಶನ್ ಕೂಡಾ ಇಲ್ಲಿ ಜೈಲು ಅನುಭವಿಸಿದ್ದು ಸಿನಿಮಾ ಕ್ಷೇತ್ರಕ್ಕೆ ಇರುವ ಇನ್ನೊಂದು ಉದಾಹರಣೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಶನಿವಾರ (ಅ. 15) ಪರಪ್ಪನ ಅಗ್ರಹಾರ ಜೈಲಿಗೆ ಸೇರುವ ಮೂಲಕ ಜೈಲಿನಲ್ಲೊಂದು ಮಿನಿ ಕ್ಯಾಬಿನೆಟ್ ನಿರ್ಮಾಣವಾಗಿದೆ. ಭೂ ಹಗರಣ, ಆ ಹಗರಣ, ಈ ಹಗರಣ ಮೂಲಕ ರಾಜಕೀಯ ಪುಢಾರಿಗಳು ಸಾಲಾಗಿ ಜೈಲು ಸೇರುತ್ತಿದ್ದಾರೆ. ಜೈಲಿನಲ್ಲಿ ಈಗಿರುವ ರಾಜಕಾರಿಣಿಗಳ ಪಟ್ಟಿ ಮಾಡಿದರೆ ಅಲ್ಲೊಂದು ಮಿನಿ ಕ್ಯಾಬಿನೆಟ್ ರಚಿಸ ಬಹುದೇನೋ? ಮುಂದೆ ಒಂದು ದಿನ ಕ್ಯಾಬಿನೆಟ್ ಮೀಟಿಂಗ್ ಅಲ್ಲೇ ಆದರೂ ಆಗಬಹುದು ಎಂದು ಜನಸಾಮಾನ್ಯರು ಅಂದು ಕೊಂಡರೆ ಆಶ್ಚರ್ಯವಿಲ್ಲ.
ಆಗಸ್ಟ್ ಎಂಟರಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಟ್ಟಾ ಸುಬ್ರಮಣ್ಯ ನಾಯ್ದು ಮತ್ತು ಅವರ ಪುತ್ರ ರತ್ನ ಏನೇ ಮಾಡಿದರೂ, ಏನೇ ಕಾಯಿಲೆ ಇದೆ ಅಂದರೂ ನ್ಯಾಯಾಲಯದಲ್ಲಿ ಜಾಮೀನು ಸಿಗುತ್ತಿಲ್ಲ. ಕೆಐಎಡಿಬಿ ಹಗರಣದಲ್ಲಿ ತಗಲ್ಹಾಕಿಕೊಂಡಿರುವ ಅಪ್ಪ ಮಗ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುತ್ತೇನೆ ರಾಜ್ಯದ ನಗರಗಳನ್ನು ಸ್ಲಂ ಮುಕ್ತ ನಗರವನ್ನಾಗಿ ಮಾಡುತ್ತೇನೆ ಎಂದು ಬೇರೆ ಏನೋ ಮಾಡಿ ಜೈಲು ಸೇರಿ ಕೊಂಡಿದ್ದಾರೆ.
ಛಲದಂಕಮಲ್ಲ ಬಿರುದಾಂಕಿತ ಯಡಿಯೂರಪ್ಪ ಅವರ ರಾಜಕೀಯ ಜೀವನ, ಜೈಲಿಗೆ ಹೋಗುವ ಘಟ್ಟಕ್ಕೆ ಬಂದಿದ್ದು ಬಹುಶಃ ವಿಧಿನಿಯಮ. ಅವರ ಮೇಲೆ ಹೇರಲಾಗಿರುವ ಕೇಸುಗಳು ಒಂದೇ ಎರಡೇ? ಬರೋಬರಿ ಐದು ಕೇಸ್. ಒಂದಲ್ಲಾದ್ರೂ ಇವರಿಗೆ ಜೈಲು ಶಿಕ್ಷೆ ಖಂಡಿತ ಎಂದು ಎಲ್ಲರೂ ಅಂದ್ಕೊಂಡಿದ್ರು. ಆದರೆ ಕಾಲ ಇಷ್ಟು ಬೇಗ ಕೂಡಿ ಬರುತ್ತೆ ಎಂದು ಯಡ್ಡಿ ಅವರ ಮನೆಯ ಮತ್ತು ಹೊರಗಿನ ವಿರೋಧಿಗಳು ಕೂಡಾ ಅಂದು ಕೊಂಡಿರಲ್ಲ. ಮಾಜಿ ಸಿಎಂ ಜೈಲಿಗೆ ಹೋದ ನಂತರ ಅವರ ಪಕ್ಷದವರೇ ಎಷ್ಟೋ ಮಂದಿ ಹಾಲು ಕುಡಿದಿದ್ದಾರೋ? ಈ ಪ್ರಶ್ನೆಗೆ ಯಡಿಯೂರು ಶ್ರೀಸಿದ್ದಲಿಂಗೇಶ್ವರ ಮಾತ್ರ ಉತ್ತರ ನೀಡಬಲ್ಲ.
ಇನ್ನು ಕೃಷ್ಣಯ್ಯ ಶೆಟ್ಟಿ ಮಾಲೂರು ತಾಲೂಕಿನಲ್ಲಿ ದಾನಶೂರ ಕರ್ಣ ಎಂದೇ ಹೆಸರುವಾಸಿಯಾಗಿರುವವರು. ಅಲ್ಲಿನ ತಾಲೂಕು ಆಫೀಸಿನಲ್ಲಿ, ಬಸ್ ನಿಲ್ದಾಣದಲ್ಲಿ ಇಂದಿಗೂ ಮಧ್ಯಾಹ್ನ ಬಿಸಿಬಿಸಿ ಫುಲ್ ಮೀಲ್ಸ್ ನೀಡಿದ್ದಾರೆ. ಅಲ್ಲದೆ, ತಿರುಪತಿ, ಶಬರಿಮಲೆ ಪ್ರವಾಸಿಗರಿಗೆ ಆರ್ಥಿಕ ತೊಂದರೆ ಇದ್ದರೆ ಹಣಕಾಸಿನ ಸಹಾಯ ಕೂಡಾ ಮಾಡಿದ್ದಾರೆ. ಅಷ್ಟೇ ಏಕೆ ವಿಧಾನಸೌಧದಲ್ಲಿ ಇಂದಿಗೂ ಡಿ ಗ್ರೂಪ್ ಕಾರ್ಮಿಕರಿಗೆ ಮಧ್ಯಾಹ್ನದ ಊಟ ಮಾನ್ಯ ಮಾಜಿ ಸಚಿವರದ್ದೇ.
ಮುಜರಾಯಿ ಸಚಿವರಾಗಿದ್ದಾಗ ರಾಜ್ಯದ ಎಂಡೋಮೆಂಟ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ದೇವಾಲಯಗಳಲ್ಲಿ ಪ್ರತಿದಿನ ಯಡಿಯೂರಪ್ಪ ಅವರ ಹೆಸರಿನಲ್ಲಿ ಅರ್ಚನೆ ನಡೆಸಬೇಕೆಂದು ಆದೇಶ ನೀಡಿದವರು. ಆಮೇಲೆ ರಾಜ್ಯದ ಜನ, ಪಕ್ಷದಲ್ಲೇ, ವಿರೋಧ ಪಕ್ಷದವರು ಕ್ಯಾಕರಿಸಿ ಉಗಿದ ನಂತರ ಆದೇಶ ಹಿಂದಕ್ಕೆ ಪಡೆದಿದ್ದರು.
ವೈಕುಂಠ ಏಕಾದಶಿಯಂದು ಲಡ್ಡು ವಿತರಿಸಿದರೇನು? ಶಿವರಾತ್ರಿಗೆ ಗಂಗಾಜಲ ನೀಡಿದರೇನು? ಭಕ್ತರಿಗೆ ಗಣೇಶ ವಿಗ್ರಹ ನೀಡಿದರೇನು? ಹೆಣ್ಣು ಮಕ್ಕಳಿಗೆ ಸೀರೆ ಹಂಚಿದರೇನು? ಭಾಗ್ಯಲಕ್ಷ್ಮಿ ಬಾಂಡ್ ನೀಡಿದರೇನು? ಏನೇನು ಅನುಭವಿಸಬೇಕೆಂದು 'ಪರಮಾತ್ಮ' ನಿರ್ಣಯಿಸಿರುತ್ತಾನೋ ಅದೆಲ್ಲಾ ನಡೆಯಲೇ ಬೇಕಲ್ಲವೇ ? ಏನಂತಿರೀ ...











Click it and Unblock the Notifications