ಕಾರ್ಪೊರೇಟರ್ ನಟರಾಜ್ ಹತ್ಯೆ : ಮುರುಗನ್ ಆರ್ಟ್ಸ್ ಮಾಲೀಕನ ಬಂಧನ

ಈ ಸಂಬಂಧ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಇದೀಗತಾನೆ ಪತ್ರಿಕಾಗೋಷ್ಠಿ ನಡೆಸಿದ್ದು, ಪ್ರಕರಣದಲ್ಲಿ ಒಟ್ಟು ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಪಾತಕ ತಂಡದ ಇತರೆ ಇಬ್ಬರು (ನವೀನ್ ಮತ್ತು ನಾಗೇಶ್) ಪರಾರಿಯಾಗಿದ್ದಾರೆ.
ಕಿನೋ ಥಿಯೇಟರ್ ಪಕ್ಕದಲ್ಲಿರುವ ಮುರುಗನ್ ಆರ್ಟ್ಸ್ ಮಾಲೀಕ ಮುರುಗನ್ ಪಾಲಿಕೆ ಚುನಾವಣೆಯಲ್ಲಿ ನಟರಾಜ್ ವಿರುದ್ಧ ಸ್ಪರ್ಧಿಸಿ, ಸೋತಿದ್ದರು. ರಾಜಕೀಯ ಹಗೆತನದಿಂದ ನಟರಾಜ್ ಅವರನ್ನು ಹತ್ಯೆ ಮಾಡಲು ಮುರುಗನ್ ಒಟ್ಟು 25 ಲಕ್ಷ ರುಪಾಯಿ ಸುಪಾರಿಗೆ ಫಿಕ್ಸ್ ಮಾಡಿದ್ದರು. ಅದರಂತೆ ಆರೋಪಿಗಳಿಗೆ 5 ಲಕ್ಷ ರುಪಾಯಿಯನ್ನೂ ಪಾವತಿಸಿದ್ದರು ಎಂದು ಮಿರ್ಜಿ ವಿವರಿಸಿದ್ದಾರೆ.
ಪಾತಕಿಗಳು ಅತ್ಯಂತ ಕರಾರುವಕ್ಕಾಗಿ ಹತ್ಯೆ ಮಾಡಿ, ಬಳಿಕ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ನಗರದಿಂದ ಪರಾರಿಯಾಗಿದ್ದರು. ಇದೀಗ ಆರೋಪಿಗಳನ್ನು ಪಕ್ಕದ ರಾಜ್ಯಗಳಲ್ಲೂ ಜಾಲಾಡಿ, ಬಂಧಿಸಲಾಗಿದೆ ಎಂದು ಮಿರ್ಜಿ ತಿಳಿಸಿದ್ದಾರೆ. ಮೋಹನ್, ಶ್ರೀನಿವಾಸ್, ಮಣಿ, ಗಿರೀಶ್, ಪಾಲ್ ನಾಗರಾಜ್, ಮಹೇಶ್, ಅಶೋಕ್ ಬಂಧಿತ ಆರೋಪಿಗಳು.
ಇಷ್ಟೊಂದು ಪ್ರಮಾಣದ ಸುಪಾರಿ ನೀಡಲಾಗಿತ್ತು ಎಂದರೆ ಅದು ಒಬ್ಬ ಮುರುಗನ್ ನಿಂದ ಸಾಧ್ಯವಿಲ್ಲ. ಇದರ ಬಲಾಢ್ಯರ ಕೈವಾಡವಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಆದ್ದರಿಂದ ಹತ್ಯೆಗೆ ನಿಜವಾಗಿಯೂ ಕಾರಣಕರ್ತರಾದವರನ್ನು ಪೊಲೀಸರು ಇನ್ನಷ್ಟು ಶ್ರಮವಹಿಸಿ ಪತ್ತೆಹಚ್ಚಬೇಕು ಎಂದು ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications