ಚುಂಬನಾಚಾರ್ಯಗೆ ಸಿದ್ರಾಮಣ್ಣನ ಟಗರ್ ಪಂಚ್

'ಅವರ ಪಕ್ಷ, ಅವರ ಕಾರ್ಯಕರ್ತರು. ಎಲ್ಲಾರಾ ಹೊಡೆದಾಡಿಕೊಳ್ಳಲಿ, ಬಡಿದಾಡಿಕೊಳ್ಳಲಿ. ಆದರೆ ಇವಯ್ಯ ಅದ್ಯಾಕೆ ಇದ್ದಿಕ್ಕಿದ್ದಂತೆ ಆಡಳಿತ ಪಕ್ಷದ ನಾಯಕರ ಮೇಲೆ ಹರಿಹಾಯಬೇಕು. ವಿಧಾನಸಭೆ ವಿಪಕ್ಷ ನಾಯಕ ಅಂದ ಮಾತ್ರಕ್ಕೆ ಹೀಗೆಲ್ಲ ಟಗರ್-ಪೊಗರ್ ಮಾತನಾಡಬಹುದಾ!?' ಎಂದು ದುರ್ಗದ ಮಂದಿ ಶ್ಯಾನೆ ಬೇಜಾರು ಮಾಡಿಕೊಂಡವ್ರೆ.
ಈ ಮಧ್ಯೆ, ಹೌದಾ! ನಮ್ಮ ಸಿದ್ರಾಮಣ್ಣ ನನಗೆ ಹಂಗಂದವ್ರಾ, ತಡಿ ಒಂದು ಕೈ ನೋಡೇಬಿಡ್ತೀನಿ. ದೊಡ್ಡೋರು ಹೇಳಿದ್ಹಂಗೆ ನಡಕೋತೀನಿ' ಎನ್ನುತ್ತಾ ರೇಣುಕಾಚಾರ್ಯ ಅಲಿಯಾಸ್ ಚುಂಬನಾಚಾರ್ಯರು ಟಗರಿನಂತೆ ಎಗರಿಕೊಂಡು ನರ್ಸ್ ಜಯಲಕ್ಷ್ಮಿಗಾಗಿ ತಡಕಾಡಿದರು ಎಂಬುದು ಶುದ್ಧ ಕುಹಕ.
ಇಷ್ಟಕ್ಕೂ ಏನಾಯಿತಪಾ ಅಂದರೆ... ನಮ್ಮ ಸಿದ್ಧಣ್ಣ, ಅವನ್ಯಾವನಲೇ ಅವ್ನು, ಅವನೇನು ರೇಣುಕಾಚಾರ್ಯನೋ 'ಚುಂಬನಾಚಾರ್ಯ'ನೋ ಎಂದು ವಿಕಟ ನಗೆ ನಕ್ಕಿದ್ದಾರೆ. ಕೊಪ್ಪಳದಲ್ಲಿ ಠಿಕಾಣಿ ಹೂಡಿ, ತಮ್ಮ 'ನಾಯಕನ' ಜತೆಗೆ ಹೆಗಲಿಗೆ ಹೆಗಲು ಕೊಟ್ಟು ಪಕ್ಷದ ಅಭ್ಯರ್ಥಿಯನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿದ ಅಬಕಾರಿ ಸಚಿವ ರೇಣುಕಾರ್ಚಾಗೆ ಇವಯ್ಯ ಸಿದ್ರಾಮಯ್ಯ ಹೀಗೆಲ್ಲ ಬಿರುದು ಅಭಿದಾನ ಮಾಡಿದ್ದಾರೆ.
ಇಷ್ಟಕ್ಕೂ ಈ ಸಿದ್ರಾಮಣ್ಣ ಕೊಪ್ಪಳದ ಕಡೆ ತಲೆಯಿಟ್ಟೂ ಮಲಗದೆ ಪಕ್ಷದ ಹೀನಾಯ ಸೋಲಿಗೆ ಕಾರಣರಾಗಿದ್ದಾರೆ. ವಾಸ್ತವವಾಗಿ ಕಾಂಗ್ರೆಸ್ ಎಲ್ಲ ಉಪಚುನಾವಣೆಗಳಂತೆ ಕೊಪ್ಪಳ ಚುನಾವಣೆಯಲ್ಲೂ ಕಾಟಾಚಾರಕ್ಕೆ ಸ್ಪರ್ಧಿಸಿತ್ತು. ಆದರೆ ಬಿಜೆಪಿ ಮತ್ತು ಜೆಡಿಎಸ್ ಪೈಪೋಟಿ ಮಧ್ಯೆ ಕೂಸು ಬಡವಾಗುವ ಬದಲು ಕೈ ಎರಡನೇ ಸ್ಥಾನಕ್ಕೆ ಎತ್ತಲ್ಪಟ್ಟಿತು ಅಷ್ಟೇ. ಸಿದ್ರಾಮಣ್ಣನ ಕೊಡುಗೆಯಂತೂ ನಗಣ್ಯವಾಗಿತ್ತು ಎಂದು ಬಿಡಿಸಿ ಹೇಳಬೇಕಾಗಿಲ್ಲ.
ಇಂಥಾ ಸಿದ್ರಾಮಣ್ಣ ಸ್ವತಃ ತಾನು ಕುಣಿಲಾರದೆ ರೇಣುಕಾಗೆ 'ಚುಂಬನಾಚಾರ್ಯ' ಎಂಬ ಬಿರುದು ಬಾವಲಿ ದಯಪಾಲಿಸಿ ಕೃತಾರ್ಥರಾಗಿದ್ದಾರೆ. ಎಲ್ಲಿಗೆ ಬಂತು ಕಾಂಗ್ರೆಸ್ ಮತ್ತು ಅದರ ಅಧಿನಾಯಕರು. (ಕಾಂಗ್ರೆಸ್ಸಿನ ಇಂದಿನ ಹೀನಾಯ ಸ್ಥಿತಿಗೆ ಕಾರಣವೇನಾದರೂ ಗೋಚರಿಸುತ್ತಿದೆಯಾ ಎಂದು ಓದುಗ ದೊರೆ ಚಿತ್ರದಲ್ಲಿ ಹುಡುಕಬಹುದು).












Click it and Unblock the Notifications