ತಿಹಾರ್ ಜೈಲುಪಾಲಾದ ಸುಧೀಂದ್ರ ಕುಲಕರ್ಣಿ ಅಥಣಿಯವ ಕಣ್ರಿ !

ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಸುಧೀಂದ್ರ ಬೆಳಗಾವಿ ಜಿಲ್ಲೆಯ ಅಥಣಿಯವರು. ಕುಗ್ರಾಮದಲ್ಲಿ ಜನಿಸಿ ಮುಂದೆ ರಾಜಕೀಯ ಪ್ರವೇಶಿಸಿ, ನಂತರ ಯಶಸ್ಸಿನ ಮೆಟ್ಟಿಲು ಏರಿದ್ದಾರೆ. ಅಥಣಿ ತಾಲೂಕಿನ ಸತ್ತಿ ಗ್ರಾಮದ ಸುಧೀಂದ್ರ ಬಾಂಬೆ ಐಐಟಿಯಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ಆರಂಭದಲ್ಲಿ ಮಾರ್ಕ್ಸ್ ವಾದದತ್ತ ಒಲವು ಹೊಂದಿದ್ದ ಸುಧೀಂದ್ರ ಮುಂದೆ ಎಬಿವಿಪಿ ಸದಸ್ಯರಾಗಿ, ಬಿಜೆಪಿಗೆ ಅಂಟಿಕೊಂಡರು.
ಎನ್‌ಡಿಎ ಸರಕಾರವಿದ್ದಾಗ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಹಿರಿಯ ನಾಯಕ ಆಡ್ವಾಣಿ ಅವರ ಆಪ್ತರಲ್ಲಿ ಒಬ್ಬರಾದರು. ಆಡ್ವಾಣಿ ಅವರ ರಾಜಕೀಯ ಮತ್ತು ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ಪತ್ರಕರ್ತರಾಗಿಯೂ, ಅಂಕಣಕಾರರಾಗಿಯೂ ಇವರು ಖ್ಯಾತರು.
ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ ಅಥಣಿ ತಾಲೂಕಿಗೆ ಅತೀ ಹೆಚ್ಚು ಅನುದಾನ ಒದಗಿಸಿಕೊಡುವಲ್ಲಿ ಸುಧೀಂದ್ರ ಮಹತ್ತರ ಪಾತ್ರ ನಿರ್ವಹಿಸಿದ್ದರು ಎಂದು ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಶಹಜಹಾನ್ ಡೊಂಗರಗಾವ ಸ್ಮರಿಸಿಕೊಳ್ಳುತ್ತಾರೆ.
ಗಡಿ ಭಾಗದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿ ಅಥಣಿ ತಾಲೂಕಿಗೆ 13.60 ಕೋಟಿ ಹಣ ಬಿಡುಗಡೆ ಮಾಡಿದ್ದರು. ಇದರಿಂದ ತಾಲೂಕಿನ ಅನೇಕ ಹಳ್ಳಿಗಳ ರಸ್ತೆ ಸುಧಾರಣೆ ಕಂಡಿದ್ದವು ಎಂದು ನೆನಪಿಸಿಕೊಂಡರು.












Click it and Unblock the Notifications