ಜನಾರ್ದನ ರೆಡ್ಡಿ ಆಪ್ತ ಸಹಾಯಕ ಅಲಿ ಎಲ್ಲಿ?

ರೆಡ್ಡಿಗಳ ಲೋಕಲ್ ವ್ಯವಹಾರದಿಂದ ಹಿಡಿದು ಫಾರಿನ್ ಬಂಡವಾಳ ಹೂಡಿಕೆ ತನಕ ಎಲ್ಲವನ್ನೂ ಅಲಿ ನೋಡಿಕೊಳ್ಳುತ್ತಿದ್ದ. ಸಿಬಿಐ ತನಿಖೆಗೆ ಅಲಿಖಾನ್ ಸಿಕ್ಕರೆ ರೆಡ್ಡಿ ಸಾಮ್ರಾಜ್ಯದ ಖಜಾನೆಯ ಕೀಲಿಕೈ ದೊರೆತಂತೆ.
ಸಿಬಿಐ ಊಹೆಗೂ ನಿಲುಕದಂತೆ, ಗೂಗಲ್ ಮ್ಯಾಪ್ ಕಣ್ಣಿಗೂ ಕಾಣದಂತೆ ಗಣಿ ರೆಡ್ಡಿಗಳ ಅಕ್ರಮ ಸಂಪಾದನೆ, ಬೇನಾಮಿ ಆಸ್ತಿಗಳನ್ನು ಕಾಪಾಡುವಲ್ಲಿ ಅಲಿ ಮಹತ್ವದ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ.
ಯಾರು ಈ ಅಲಿಖಾನ್: ಆಂಧ್ರ ಪ್ರದೇಶದ ಅನಂತಪುರಂ ಜಿಲ್ಲೆಯ ಗುಂತಕಲ್ಲಿನ ಅಲಿ, ಓದಿದ್ದು ಇಂಜಿನಿಯರಿಂಗ್ ಪದವಿ.
ಜನಾರ್ದನರೆಡ್ಡಿಯ ಆಪ್ತ ಸಹಾಯಕನಾಗಿ ಕಳೆದ ನಾಲ್ಕು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ. ಅಕ್ರಮ ಗಣಿಗಾರಿಕೆಯ ಪರ್ವಕಾಲ ಕೂಡಾ. 2007 ರಿಂದ 2011ರ ವರೆಗೆ ನಡೆದಿದೆ ಎಂಬುದು ಲೋಕಾಯುಕ್ತ ವರದಿಯಿಂದ ಎಲ್ಲರಿಗೂ ತಿಳಿದಿರುವ ವಿಷಯ.
ಮಾಜಿ ಸಚಿವ ಶ್ರೀರಾಮುಲು ಸಂಬಂಧಿ ಕಂಪ್ಲಿ ಶಾಸಕ ಸುರೇಶ್‌ಬಾಬು ಅವರ ಬಾಲ್ಯ ಸ್ನೇಹಿತನಾಗಿರುವ ಅಲಿ ರೆಡ್ಡಿ ಸಾಮಾಜ್ಯದ ಮುಖ್ಯ ಸೇನಾನಿಯಾಗಿಬಿಟ್ಟ. ಜನಾರ್ದನ ರೆಡ್ಡಿ ವಿಶ್ವಾಸ ಗಳಿಸಿಕೊಳ್ಳುವಲ್ಲಿ ಬಹು ಬೇಗ ಯಶಸ್ವಿಯಾದ.
ಆರಂಭದಲ್ಲಿ ರೆಡ್ಡಿ ಪ್ರವಾಸದ ವೇಳೆ ಅಗತ್ಯವಿರುವ ವಾಹನ, ವಸತಿ, ಹೆಲಿಕಾಪ್ಟರ್ ವ್ಯವಸ್ಥೆ ಮಾಡುವ ಕೆಲಸ ಈತನದಾಗಿತ್ತು. ನಂತರ ರೆಡ್ಡಿಯ ಅಂತರಂಗ ಬಹಿರಂಗ ಅರಿತು ಬಲಗೈ ಬಂಟನಾದ.
ಜನಾರ್ದನರೆಡ್ಡಿಯ ಗಣಿ ಜಗತ್ತಿನ ದೇವರಾದರೆ ಅಲಿ ಪೂಜಾರಿಯಂತೆ ಎಲ್ಲವನ್ನೂ ನಿರ್ವಹಿಸುತ್ತಿದ್ದ. ಅಲಿ ಕೈ ಸೇರಿದ್ದೆ ಯಾವ ಫೈಲೂ ರೆಡ್ಡಿಗಳನ್ನು ತಲುಪಿರಲಿಲ್ಲ ಎನ್ನಲಾಗಿದೆ.
ಇಂಜಿನಿಯರ್ ಅಲಿ ಬುದ್ಧಿವಂತಿಕೆ ಮೆಚ್ಚಿದ್ದ ರೆಡ್ಡಿ ಕೂಡಾ ಅತನನ್ನು ಬಹುವಾಗಿ ನಂಬಿದ್ದರು. ಸ್ವಾಮಿನಿಷ್ಠೆ ಮೆರೆದಿರುವ ಅಲಿ ಈಗ ಅಳಿವಿನಂಚಿನಲ್ಲಿರುವ ರಿಪಬ್ಲಿಕ್ ಆಫ್ ಬಳ್ಳಾರಿಯ ಗುಪ್ತ ನಿಧಿಗಳನ್ನು ಭದ್ರಪಡಿಸುತ್ತಿದ್ದಾನೆ ಎನ್ನುತ್ತದೆ ಮೂಲಗಳು. ಅಲಿ ಸಿಗುವ ತನಕ ರೆಡ್ಡಿಗಳು ಸೇಫ್ ಎನ್ನಲಾಗಿದೆ.












Click it and Unblock the Notifications