ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಹಾನ್ಸ್ ವೈದ್ಯರ ಫಿಕ್ಸೆಡ್ ಡೆಪಾಸಿಟ್ ಖಾತೆಗೇ ಗುನ್ನಾ!

By Srinath
|
Google Oneindia Kannada News

sbi-credit-card-fraud-nimhans-doctor-duped
ಬೆಂಗಳೂರು, ಸೆ. 8: NIMHANSನ ನರರೋಗ ವಿಭಾಗದ ಮುಖ್ಯಸ್ಥ ಡಾ. ವಿ ಸಂಪತ್ ಅವರಿಗೆ ಆಸ್ಪತ್ರೆಯ ಆವರಣದಲ್ಲೇ ಇರುವ SBI ಶಾಖೆಯ ಮ್ಯಾನೇಜರ್ ಮತ್ತು ಅವರ ಸಹಾಯಕ ಬರೋಬ್ಬರಿ 5.3 ಲಕ್ಷ ರುಪಾಯಿ ಉಂಡೆನಾಮ ತಿಕ್ಕಿದ್ದಾರೆ.

ಬ್ಯಾಂಕು ಕೈಗೆಟುಕುವಷ್ಟು ಹತ್ತಿರದಲ್ಲಿರುವಾಗ ವೃಥಾ ಬೇರೆ ಬೇರೆ ಕಡೆ ಯಾಕ ಹೋಗಬೇಕು ಎಂದು ಎಣಿಸಿದ ಡಾ. ಸಂಪತ್ ಅವರು NIMHANSನ SBI ಶಾಖೆಯಲ್ಲಿ ಖಾತೆ ತೆರೆದರು. ಜತೆಗೆ ಕ್ರೆಡಿಟ್ ಕಾರ್ಡ್ ಸೌಲಭ್ಯವೂ ಇರಲೆಂದು ಫೆಬ್ರವರಿ ತಿಂಗಳಲ್ಲಿ ಬ್ಯಾಂಕಿಗೆ ಅರ್ಜಿ ಕೊಟ್ಟರು. ಆದರೆ ಯಾಕೋ ಅರ್ಜಿಗೆ ಮಾನ್ಯತೆ ಸಿಗಲಿಲ್ಲ.

ಆದರೆ ಡಾ. ಸಂಪತ್ ಅವರು ಮರಳಿ ಯತ್ನವ ಮಾಡು ಎನ್ನುವಂತೆ ಬ್ಯಾಂಕಿನ ಮ್ಯಾನೇಜರ್ ಚೇಂಬರಿಗೆ ಎಡತಾಕಿದರು. ಕೊನೆಗೆ ಮ್ಯಾನೇಜರ್ ಸಾಹೇಬರು ಸಮೀರ್ ಕದಂ ಎಂಬ ಸಿಬ್ಬಂದಿಯನ್ನು ಕರೆದು ವೈದ್ಯ ಮಹಾಷಯರಿಗೆ ಕ್ರೆಡಿಟ್ ಕಾರ್ಡ್ ನೀಡುವಂತೆ ಸೂಚಿಸಿದರು.

ಫಿಕ್ಸೆಡ್ ಡೆಪಾಸಿಟ್ ಖಾತೆಗೇ ಗುನ್ನಾ!: ಎಲ್ಲ ವಿವರ ಪಡೆದ ಸಮೀರ್ ಮಹಾಷಯ 21 ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಕೊಡಿಸುವುದಾಗಿ ಭರವಸೆ ನೀಡಿದ. ಆದರೆ ತಿಂಗಳಾನುಗಟ್ಟಲೆ ಕಳೆದರೂ ಕ್ರೆಡಿಟ್ ಕಾರ್ಡ್ ಇವರ ಕೈಸೇರಲಿಲ್ಲ. ದಡಬಡಾಯಿಸಿದ ಡಾ. ಸಂಪತ್ ಅವರು ಮತ್ತೆ ಮ್ಯಾನೇಜರ್ ಚೇಂಬರಿಗೆ ನುಗ್ಗಿದರು. ಆದರೆ 'ನೀವ್ಯಾರೋ ನನಗೆ ಗೊತ್ತಿಲ್ಲ. ನೀವು ಹೇಳಿದಂತೆ ನಾನು ಯಾರಿಗೂ ನಿಮ್ಮನ್ನು ಪರಿಚಯಿಸಿಲ್ಲ' ಎಂದು ಮ್ಯಾನೇಜರ್ ಕೈಯೆತ್ತಿದರು.

ಯಾಕೋ ಎಡವಟ್ಟಾಗಿದೆ ಎಂದು ಅರಿತ ವೈದ್ಯರು ತಕ್ಷಣ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ದೂರು ವಿಭಾಗದ ಮೊರೆ ಹೋದರು. ಅಲ್ಲಿ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಲಾಗಿ ಕ್ರೆಡಿಟ್ ಕಾರ್ಡ್ ವಿತರಣೆಯಾಗಿದೆ. ಆದರೆ ಅದು ನಕಲಿ ವಿಳಾಸಕ್ಕೆ ಕಳಿಸಲಾಗಿದೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಯಿತು.

ದಾಖಲೆಗಳ ಕಡೆ ಮತ್ತೊಮ್ಮೆ ಕಣ್ಣು ಹಾಯಿಸಿದಾಗ ಡಾ. ಸಂಪತ್ ಅವರು ನೀಡಿದ್ದ ದಾಖಲೆಗಳನ್ನು ತಿರುಚಿ, ಬೇರೆಯದೇ ದಾಖಲೆಗಳು ಸೃಷ್ಟಿಯಾಗಿರುವುದು ಕಂಡುಬಂತು. ಅಷ್ಟೇ ಅಲ್ಲ. ಅದೇ ಕ್ರೆಡಿಟ್ ಕಾರ್ಡ್ ಬಳಸಿ, ಡಾ. ಸಂಪತ್ ಅವರ ಫಿಕ್ಸೆಡ್ ಡೆಪಾಸಿಟ್ ಖಾತೆಯಲ್ಲಿದ್ದ 5.3 ಲಕ್ಷ ರೂ. ಹಣ ತೆಗೆದಿರುವುದಾಗಿ ಬ್ಯಾಂಕಿನವರು ಹೇಳಿದಾಗ ವೈದ್ಯರ ಹೃದಯ ಧಸಕ್ಕೆಂದಿದೆ. ಸಿದ್ಧಾಪುರ ಠಾಣೆ ಪೊಲೀಸರು ಈಗ SBI ಮ್ಯಾನೇಜರ್ ಬೆನ್ನು ಹತ್ತಿದ್ದಾರೆ.

English summary
NIMHANS Neurosurgeon Dr Sampath V has filed a complaint in The Siddapura police station against SBI branch on NIMHANS campus alleging misuse of his credit card and withdrawal Rs 5.3 lakh from his account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X