ಕಟಕಟೆಯಲ್ಲಿ ಎಚ್ ಡಿಕೆ: ಜೆಡಿಎಸ್ ನೊಗ ಯಾರ ಹೆಗಲಿಗೆ?

ಯಡಿಯೂರಪ್ಪ ಸರಕಾರದ ವಿರುದ್ಧ ಭಾರಿ ಹೋರಾಟ ನಡೆಸಿದ ಕುಮಾರಸ್ವಾಮಿಯೇ ಈಗ ಅಕ್ರಮ ಗಣಿ ಆರೋಪ ಎದುರಿಸುವಂತಾಗಿದೆ. ಲೋಕಾಯುಕ್ತ ವರದಿಯಲ್ಲಿನ ಜಂತಕಲ್ ಗಣಿ ಆರೋಪಗಳಿಂದ ಕುಮಾರಸ್ವಾಮಿ ವಿಚಲಿತರಾಗಿದ್ದು, ಇದು ಪಕ್ಷದ ಸಾರಥ್ಯದ ಮೇಲೂ ಪರಿಣಾಮ ಬೀರಲಿದೆ.
ಸದ್ಯಕ್ಕೆ ಕೋರ್ಟ್ ವಿಚಾರಣೆಗಳಿಂದ ಹೈರಾಣಗೊಂಡಿರುವ ಕುಮಾರಸ್ವಾಮಿ ಇದೇ ತಿಂಗಳು ನಡೆಯಲಿರುವ ಕೊಪ್ಪಳ ವಿಧಾನಸಭೆ ಉಪಚುನಾವಣೆಗಾಗಿ ಪಕ್ಷದ ಪರ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುವುದು ಅನುಮಾನವೇ. ಇಂತಹ ಸಂಕಷ್ಟದಲ್ಲಿ ನಾಯಕತ್ವವನ್ನು ಯಾರಿಗೆ ಕೊಡಬೇಕು ಎಂಬುದು ದೊಡ್ಡ ಗೌಡರಿಗೆ ತಲೆನೋವಾಗಿದೆ.
ಯಾರಿಗೂ ಕೊಡದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರೇ ಸಾರಥಿಯಾಗಿ ಪಕ್ಷವನ್ನು ಮುನ್ನಡೆಸುವರೇ? ಅಥವಾ ಶಾಸಕಾಂಗ ಪಕ್ಷದ ನಾಯಕ, ಸಚಿವರಾಗಿ ಅನುಭವ ಹೊಂದಿರುವ ಎಚ್ ಡಿ ರೇವಣ್ಣ ಅವರ ಹೆಗಲೇರುವುದೆ? ಎಂಬುದನ್ನು ಕಾದುನೋಡಬೇಕಿದೆ.
ಭ್ರಷ್ಟಾಚಾರದ ಸುಳಿಯಲ್ಲಿ ಪತರಗುಟ್ಟುತ್ತಿರುವ ಬಿಜೆಪಿ ನಾಯಕರ ಸಾಲಿನಲ್ಲಿ ಕುಮಾರಸ್ವಾಮಿ ಮತ್ತು ಅವರ ಧರ್ಮಪತ್ನಿ, ಶಾಸಕಿ ಅನಿತಾರ ಹೆಸರೂ ಕೇಳಿಬಂದಿರುವುದು ಜೆಡಿಎಸ್ ಗೆ ಮಗ್ಗಲ ಮುಳ್ಳಾಗಿದೆ. ಜತೆಗೆ, ಇತ್ತೀಚೆಗೆ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರ ವಿರುದ್ಧ ರಾತ್ರಿಪಾಳಿಯ ಆರೋಪ ಮಾಡಿರುವುದು ಪಕ್ಷಕ್ಕೆ ಸಾಕಷ್ಟು ಮುಜುಗುರ ತಂದಿದೆ.
ಇದರಿಂದ ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರಿಗೆ ಕೈಕಾಲು ಕಟ್ಟಿಹಾಕಿದಂತಾಗಿದೆ ಎಂಬುದು ಪಕ್ಷದೊಳಗಿಂದ ಎದ್ದಿರುವ ಕೂಗು, ಕೊರಗು.












Click it and Unblock the Notifications