ಮಹಾಮಳೆಗೆ ಮುಂಬೈ ತತ್ತರ, ಸಂಚಾರ ಸ್ಥಗಿತ

ಮುಂಬೈ ನಗರದಲ್ಲಿ ನಿನ್ನೆ ಸುಮಾರು 57.6 ಮಿಲಿಮೀಟರ್ ಮಳೆ ಸುರಿದಿದೆ. ಬೆಳಗ್ಗೆ 8.30 ಕ್ಕೆ ಶುರುವಾಗಿ ಮಧ್ಯಾಹ್ನ 2.30 ರ ವರೆಗೆ ಸುರಿಯುವ ಭಾರಿ ಮಳೆಯ ಕಾರಣದಿಂದ ಆಫೀಸ್, ಶಾಲೆ, ಕಾಲೇಜುಗಳಿಗೆ ಹೋಗುವವರಿಗೆ ತುಂಬಾ ತೊಂದರೆಯಾಗಿದೆ. ಕೆಲವೆಡೆ ರೈಲುಗಳು 30 ರಿಂದ 40 ನಿಮಿಷ ನಿಧಾನವಾಗಿ ಓಡುತ್ತಿದೆ.
ಮುಸುಕು ಮುಚ್ಚಿದ ವಾತಾವರಣವಿರುವುದರಿಂದ ಎಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಗಂಟೆಗಟ್ಟಲೆ ನಿಂತಲ್ಲೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಂಜು ಕವಿದಿರುವುದರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಮುಂಜಾನೆ ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ವಿಮಾನಗಳ ಸಂಚಾರ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ ಎಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(MIAL) ಹೇಳಿದೆ.
ಅಂಧೇರಿ, ಬೊರಿವಲಿ, ಕಂಡಿವಲಿ, ಮಲಾಡ್, ಧಾರಾವಿ ಮುಂತಾದ ಪ್ರದೇಶಗಳಲ್ಲಿ ರಸ್ತೆಗಳ ಹೊಂಡದ ತುಂಬಾ ನೀರು ತುಂಬಿಕೊಂಡಿದ್ದು, ಜನರು ಜೀವ ಭಯದಿಂದ ಓಡಾಡುತ್ತಿದ್ದಾರೆ. ವಿಕ್ರೋಲಿಯಲ್ಲಿ ಭೂ ಕುಸಿತ ಸಂಭವಿಸಿದ್ದು, ಯಾವುದೇ ಜೀವಹಾನಿಯಾಗಿಲ್ಲ. ಆದರೆ, ಕಟ್ಟಡ ಕುಸಿತದ ಭೀತಿ ಇಲ್ಲಿನ ಜನರನ್ನು ಆವರಿಸಿದ್ದು ಬೃಹನ್ ಮುಂಬೈ ನಗರ ಪಾಲಿಕೆ ವಿಪತ್ತು ನಿರ್ವಹಣ ಘಟಕೆ ತ್ವರಿತ ಕಾರ್ಯಚಾರಣೆ ನಡೆಸಿದೆ.
ಇನ್ನು ಒಂದೆರಡು ದಿನ ಸೂರ್ಯನನ್ನು ನೋಡುವ ಭಾಗ್ಯ ಜನರಿಗೆ ಇಲ್ಲ. ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಗುಡುಗು ಸಹಿತ ಭಾರಿ ಮಳೆ ಬೀಳುವ ಸಾಧ್ಯತೆಯಿದೆ ಎಂದು ಮುಂಬೈ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications