ನಂಜನಗೂಡು ಬಳಿ ಉರುಳಿಗೆ ಸಿಕ್ಕಿ ಬಿದ್ದ ಚಿರತೆ

Leopard Appears near Nanjangud
ಮೈಸೂರು, ಆಗಸ್ಟ್ 27: ನಂಜನಗೂಡು ತಾಲೂಕಿನ ಅಡಕನಹಳ್ಳಿ ಹುಂಡಿ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಆಗಾಗ್ಗೆ ಕಾಣಿಸಿಕೊಂಡು ಕುರಿ, ದನಕರುಗಳ ಮೇಲೆ ದಾಳಿ ಮಾಡುತ್ತಾ ರೈತರ ನಿದ್ದೆಗೆಡಿಸಿದ್ದ ಚಿರತೆಯೊಂದು ಕಾಡು ಹಂದಿ ಹಾವಳಿ ತಡೆಗೆ ಹಾಕಿದ್ದ ಉರುಳಿಗೆ ಸಿಕ್ಕಿಬಿದ್ದಿದ್ದು, ಮೈಸೂರು ಮೃಗಾಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅದನ್ನು ಹಿಡಿದು ಮೃಗಾಲಯಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಅಡಕನಹಳ್ಳಿ ಹುಂಡಿ ಗ್ರಾಮದಲ್ಲಿ ಜಮೀನಿಗೆ ದಾಳಿ ಮಾಡುವ ಕಾಡು ಹಂದಿಗಳನ್ನು ಹಿಡಿಯುವ ಸಲುವಾಗಿ ಪೊದೆಯೊಂದರಲ್ಲಿ ಉರುಳು ಹಾಕಿಡಲಾಗಿತ್ತು. ಆದರೆ ಅದೇ ಮಾರ್ಗದಲ್ಲಿ ಬಂದ ಚಿರತೆ ಈ ಉರುಳಿಗೆ ಶುಕ್ರವಾರ ಸಿಕ್ಕಿಬಿದ್ದಿತು.

ಚಿರತೆ ಪೊದೆಯಲ್ಲಿ ಹಾಕಲಾಗಿದ್ದ ಉರುಳಿಗೆ ಸಿಕ್ಕಿಬಿದ್ದಿರುವ ವಿಷಯ ತಿಳಿದ ಗ್ರಾಮಸ್ಥರು ನಂಜನಗೂಡು ತಹಶೀಲ್ದಾರ್ ನವೀನ್ ಜೋಸೆಫ್ ಅವರಿಗೆ ತಿಳಿಸಿದ್ದರು. ಅದರಂತೆ ಅವರು ಅರಣ್ಯ ಇಲಾಖೆ ಹಾಗೂ ಮೈಸೂರು ಮೃಗಾಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮೈಸೂರು ಮೃಗಾಲಯದ ಸಿಬ್ಬಂದಿ ಅದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡುವ ಮೂಲಕ ಚಿರತೆಯನ್ನು ಹಿಡಿದು ಮೃಗಾಲಯಕ್ಕೆ ತಂದಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರಳುವ ವೇಳೆಗೆ ಚಿರತೆಯನ್ನು ಸುತ್ತುವರಿದ ಗ್ರಾಮಸ್ಥರ ಪೈಕಿ ಕೆಲವರು ಅದರ ಮೇಲೆ ಕಲ್ಲು, ದೊಣ್ಣೆಯನ್ನು ಬೀಸಿದ್ದರಿಂದ ಗಾಯಗೊಂಡಿದೆ.

ಅಲ್ಲದೆ ಉರುಳಲ್ಲಿ ಸಿಕ್ಕಿ ಒದ್ದಾಡಿದ್ದರಿಂದ ನಿತ್ರಾಣಗೊಂಡಿತ್ತು ಹೀಗಾಗಿ ಅದಕ್ಕೆ ಮೃಗಾಲಯದಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದು ಆರೋಗ್ಯ ಸುಧಾರಿಸಿದ ಬಳಿಕ ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗುವುದು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+