ಮೈಸೂರಿಗರನ್ನು ದಿಕ್ಕೆಡಿಸಿದ ಪುಂಡ ಆನೆ ಮಾಸ್ತಿ

ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮೈಸೂರಿಗೆ ಕಾಡಾನೆ ನುಗ್ಗಿ ದಾಂಧಲೆ ನಡೆಸಿದ್ದು ಇನ್ನೂ ಹಸಿರಾಗಿರುವಾಗಲೇ ರಸ್ತೆಯಲ್ಲಿ ಓಡಿ ಬರುತ್ತಿದ್ದ ಆನೆಯನ್ನು ಕಂಡ ಜನರು ಎಲ್ಲೆಂದರಲ್ಲಿ ಓಡಿ ಬದುಕಿದರೆ ಸಾಕಪ್ಪಾ ಎಂದು ನಿಟ್ಟುಸಿರು ಬಿಡತೊಡಗಿದ್ದರು. ಆದರೆ ಆನೆ ಹಿಂದೆಯೇ ಮಾವುತ ಹಿಂಬಾಲಿಸಿ ಬರುತ್ತಿದ್ದುದನ್ನು ಕಂಡ ಜನರು ಇದು ಕಾಡಾನೆ ಅಲ್ಲ ಸಾಕಾನೆ ಎಂಬುವುದನ್ನು ಮನದಟ್ಟು ಮಾಡಿಕೊಂಡರಾದರೂ ಕಾಲಿಗೆ ಬುದ್ದಿ ಹೇಳುವುದನ್ನು ಮರೆಯಲಿಲ್ಲ.
ಘಟನೆಯ ವಿವರ : ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಲಕ್ಷ್ಮಿ ಹಾಗೂ ಮಾಸ್ತಿ ಎಂಬ ಎರಡು ಸಾಕಾನೆಗಳಿದ್ದು, ಇವುಗಳನ್ನು ಮಠದಿಂದ ವಿಹಾರಕ್ಕೆ ಕರೆದೊಯ್ಯಲಾಗುತ್ತದೆ. ಸಾಮಾನ್ಯವಾಗಿ ಮಠದಿಂದ ಹೊರಕ್ಕೆ ಕರೆತರುವ ಮಾವುತರು ಅಗ್ರಹಾರ, ಬಸವೇಶ್ವರ ರಸ್ತೆ, ಚಾಮುಂಡಿಪುರಂ ವೃತ್ತಕ್ಕಾಗಿ ವಿಹಾರ ನಡೆಸಿ ಬಳಿಕ ಮಠಕ್ಕೆ ಕರೆದೊಯ್ಯುತ್ತಾರೆ.
ಅದರಂತೆ ಇಂದು ಮಧ್ಯಾಹ್ನ ಲಕ್ಷ್ಮಿ ಹಾಗೂ ಮಾಸ್ತಿ ಸಾಕಾನೆಗಳು ವಿಹಾರ ಮುಗಿಸಿ ಮಠದತ್ತ ತೆರಳುತ್ತಿದ್ದವು. ಚಾಮುಂಡಿಪುರಂ ವೃತ್ತದ ಬಳಿ ದಿಢೀರ್ ಶಬ್ದ ಮಾಡಿಕೊಂಡು ಎದುರಿನಿಂದ ಆಂಬ್ಯುಲೆನ್ಸ್ ವಾಹನ ಬಂದಿದೆ. ಶಬ್ದ ಕೇಳಿದ ಮಾಸ್ತಿ ಎಂಬ ಆನೆ ಹೆದರಿ ದಿಕ್ಕಾಪಾಲಾಗಿ ಓಡಿದೆ. ಜೊತೆಯಲ್ಲಿದ್ದ ಮಾವುತ ಅದನ್ನು ನಿಯಂತ್ರಿಸಲು ಮಾಡಿದ ಪ್ರಯತ್ನವೆಲ್ಲಾ ಈ ಸಂದರ್ಭ ವಿಫಲವಾಯಿತಲ್ಲದೆ, ಆತನ ಮೇಲೆಯೇ ದಾಳಿ ಮಾಡಲು ಮುಂದಾಯಿತು.
ಮರವೇರಿದ ಮಾವುತ : ರಸ್ತೆಯಲ್ಲಿ ಓಡಿದ ಪರಿಣಾಮ ಆಟೋ ರಿಕ್ಷಾವೊಂದು ಜಖಂಗೊಂಡಿತ್ತಾದರೂ ಯಾವುದೇ ಅನಾಹುತವಾಗಿಲ್ಲ. ಕೂಡಲೇ ಸಾಕಾನೆ ಲಕ್ಷ್ಮಿಯ ಮೂಲಕ ಮಾಸ್ತಿಯನ್ನು ನಿಯಂತ್ರಿಸಲು ಪ್ರಯತ್ನಿಸಲಾಯಿತು. ಆಗ ನಿಯಂತ್ರಣಕ್ಕೆ ಬಂದ ಮಾಸ್ತಿ ಮಠದ ಕಡೆಗೆ ತೆರಳಿತ್ತಾದರೂ ಮತ್ತೆ ತನ್ನ ಪುಂಡಾಟಿಕೆ ಪ್ರಾರಂಭಿಸಿತು. ಅಲ್ಲೇ ಇದ್ದ ಮರಕ್ಕೆ ಮೈಯ್ಯನ್ನು ಉಜ್ಜಲಾರಂಭಿಸಿತು. ಇದರಿಂದ ಹೆದರಿದ ಮಾವುತ ಮರವನ್ನೇರಿ ತಪ್ಪಿಸಿಕೊಂಡನು.
ಈ ಸಂದರ್ಭ ಲಕ್ಷ್ಮಿಯ ಮಾವುತನೇ ಮಾಸ್ತಿಯನ್ನು ನಿಯಂತ್ರಿಸಲು ಹೆಣಗಾಡಬೇಕಾಯಿತು. ಬಳಿಕ ಅಲ್ಲಿಂದ ಮುಂದೆ ಸಾಗಿದ ಆನೆ ಸ್ಮಶಾನದೊಳಕ್ಕೆ ಸೇರಿಕೊಂಡಿತು. ಅಷ್ಟರಲ್ಲಿಯೇ ಮೈಸೂರಿಗೆ ಆಗಮಿಸಿರುವ ಗಜಪಡೆಯ ಪೈಕಿ ಪುಂಡಾನೆಗಳನ್ನು ನಿಯಂತ್ರಿಸುವಲ್ಲಿ ಹೆಸರು ಮಾಡಿರುವ ಅಭಿಮನ್ಯು ಹಾಗೂ ಗಜೇಂದ್ರ ಎಂಬ ಎರಡು ಆನೆಗಳನ್ನು ಸ್ಥಳಕ್ಕೆ ಕರೆಸಲಾಯಿತು. ಅವುಗಳು ಮಾಸ್ತಿಯನ್ನು ನಿಯಂತ್ರಿಸಿ ಮಠಕ್ಕೆ ಸೇರಿಸಿದವು. ಇದರಿಂದ ಸುಮಾರು ಎರಡು ಗಂಟೆಗಳ ಕಾಲ ಸೃಷ್ಟಿಯಾಗಿದ್ದ ಆತಂಕ ದೂರವಾಯಿತಲ್ಲದೆ, ಈ ವ್ಯಾಪ್ತಿಯ ಜನ ನೆಮ್ಮದಿಯ ಉಸಿರು ಬಿಟ್ಟರು.












Click it and Unblock the Notifications