ಬಿಜೆಪಿಯಲ್ಲೇ ಯಡ್ಡಿ ಧರಣಿಗೆ ಅಡ್ಡಿ; ವರಿಷ್ಠರಿಗೆ ದೂರು

ನಗರದ ಎಂ.ಜಿ. ರಸ್ತೆಯ ಗಾಂಧಿ ಪ್ರತಿಮೆ ಮುಂದೆ ಗುರುವಾರ ಬೆಳಗ್ಗೆ 10ಕ್ಕೆ ಧರಣಿ ನಡೆಸುವುದಾಗಿ ಯಡಿಯೂರಪ್ಪ ಪ್ರಕಟಿಸಿದ ಬೆನ್ನಲೇ, ಪಕ್ಷದ ಹಿರಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿ ವರಿಷ್ಠರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಬಾವುಟ ಹಿಡಿದು ಪ್ರತಿಭಟನೆ ನಡೆಸಬಾರದು ಎಂದು ಪಕ್ಷವು ಕಟ್ಟುನಿಟ್ಟಾಗಿ ತಾಕೀತು ಮಾಡಿರುವ ಹಿನ್ನೆಲೆಯಲ್ಲಿ ರಾಗ ಬದಲಿಸಿರುವ ಯಡಿಯೂರಪ್ಪ, ಪಕ್ಷಾತೀತವಾಗಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಪ್ರಕಟಿಸಿದ್ದಾರೆ.
ಸ್ವತಃ ಯಡಿಯೂರಪ್ಪ ಅವರೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದಾರೆ. ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಕೋರ್ಟ್ ಮೊರೆ ಹೋಗಿದ್ದಾರೆ. ಇಂತಹವರು ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಸೂಚಿಸಿ ಧರಣಿ ನಡೆಸುವುದರಲ್ಲಿ ಅರ್ಥವಿಲ್ಲ. ಇದರಿಂದ ಜನರ ಮುಂದೆ ಪಕ್ಷ ನಗೆಪಾಟಲಿಗೆ ಈಡಾಗಬೇಕಾಗುತ್ತದೆ ಎಂದು ದೂರಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಯಡಿಯೂರಪ್ಪ ಬಣಕ್ಕೆ ಸೇರಿದ ಕೆಲ ಸಚಿವರು ಸಹ ಧರಣಿ ಬೇಡ ಎಂದು ಅವರಿಗೆ ಸಲಹೆ ನೀಡಿದ್ದಾರೆ. ಅಲ್ಲದೆ ಅವರ ಕಡೆಯವರೇ ಪಕ್ಷದ ವರಿಷ್ಠರಿಗೂ ಈ ಕುರಿತು ಮಾಹಿತಿ ನೀಡಿ ಧರಣಿ ನಿರ್ಧಾರದಿಂದ ಹಿಂದಕ್ಕೆ ಸರಿಯಲು ಸೂಚಿಸುವಂತೆ ಕೋರಿದ್ದಾರೆ ಎಂದು ಗೊತ್ತಾಗಿದೆ.












Click it and Unblock the Notifications