ತಿಹಾರ್ ನಲ್ಲಿ ಭ್ರಷ್ಟಾಚಾರಿಗಳ ಜತೆ ಭ್ರಷ್ಟಾಚಾರ ವಿರೋಧಿಗಳೂ..

ಒಂದು ಹಿರಿಯ ಜೀವವೆನ್ನದೆ ದೆಹಲಿ ಪೊಲೀಸರು ಮಂಗಳವಾರ (ಆ 16) ಅಣ್ಣಾ ಬಂಧಿಸಿದ ರೀತಿ ಅವರಿಗೆ ಶೋಭೆ ತರುವಂತದಲ್ಲ. ಶಾಂತಿ ರೀತಿಯಲ್ಲಿ ಪ್ರತಿಭಟನೆಗೆ ಅವಕಾಶ ಕೊಡದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಕೇಂದ್ರ ಗೃಹ ಮಂತ್ರಿ ಅವರ ದೆಹಲಿ ಪೋಲೀಸರ ಪರ ಸಮರ್ಥನೆ ಇಂದಿನ ವಾಸ್ತವತೆಗೆ ಹಿಡಿದ ಕೈಗನ್ನಡಿ. ಅಣ್ಣಾ ಅವರ ಪಾರದರ್ಶಕತೆಯನ್ನು ಅಳಿಯುವ ಕೇಂದ್ರ ಸರಕಾರ, ಬೇಕಾಬಿಟ್ಟಿ ಹೇಳಿಕೆ ನೀಡುವ ಕಾಂಗ್ರೆಸ್ ಧುರೀಣರು. ಪ್ರತಿಭಟನೆಯ ಕಾವು ಜಾಸ್ತಿಯಾಗುತ್ತಿದ್ದಂತೆ ಅಣ್ಣಾ ಬಂಧನ ವಾಪಾಸು ಪಡೆಯುವ ಗೊಂದಲಮಯ ನೀತಿ.
ನ್ಯಾಯುತವಾಗಿ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆ ಅವರ ನಡೆ ರಾಜಕೀಯ ಪಕ್ಷಗಳಿಗೆ ಯಾಕೆ ಸಹಿಸಲಾಗುತ್ತಿಲ್ಲ ಎನ್ನುವುದೇ ಪ್ರಶ್ತ್ನೆ? ಎಲ್ಲಾ ರಾಜಕೀಯ ಪಕ್ಷಗಳು ತಮ್ಮಮ್ಮ ಬೇಳೆ ಬೇಯಿಸಿಕೊಳ್ಳಲು ಬೇರೆ ಬೇರೆ ಊರಿನಿಂದ ಹಣ ಕೊಟ್ಟು ಜನರ ಕರೆಸಿಕೊಂಡು ಬೃಹತ್ ಸಾರ್ವಜನಿಕ ಸಭೆ ನಡೆಸುತ್ತಾರೆ, ಆದರೆ ದೇಶವನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಭ್ರಷ್ಟಾಚಾರ ತಡೆಯಲು ಜನ ಲೋಕಪಾಲ್ ಬಿಲ್ಲನ್ನು ಪಾಸ್ ಮಾಡಿಯೆಂದರೆ ಕೊಂಕಾಡುತ್ತದೆ. ಇದನ್ನು ಪ್ರತಿಭಟಿಸಿದರೆ ಸೆರೆಮನೆಗೆ ಅಟ್ಟುತ್ತದೆ.
ಇನ್ನೊಂದು ವಿಪರ್ಯಾಸವೇನಂದರೆ, ಒಂದು ಕಾಲದಲ್ಲಿ ತಿಹಾರ್ ಜೈಲಿನ ಸುಪರಿಡೆಂಟ್ ಆಗಿದ್ದ ಕಿರಣ್ ಬೇಡಿಯನ್ನೂ ಬಂಧಿಸಿ ಆ ಜೈಲಿಗೆ ತಳ್ಳಿದ್ದು. ದೇಶದ ಸಮಸ್ಯೆಯ ವಿರುದ್ದ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆ, ಕಿರಣ್ ಬೇಡಿ, ಅರವಿಂದ್ ಕ್ರೇಜಿವಾಲ್ ಮುಂತಾದವರು ಒಂದೆಡೆಯಾದರೆ ಲಕ್ಷ ಲಕ್ಷ ಕೋಟಿ ರೂಪಾಯಿಯಲ್ಲಿ ದೇಶದ ಬೊಕ್ಕಸಕ್ಕೆ ಬತ್ತಿ ಇಟ್ಟ ರಾಜಾಕಾರಿಣಿಗಳು ಇನ್ನೊಂದೆಡೆ. ಈ ರಾಜಕಾರಿಣಿಗಳ ಮತ್ತು ಕೇಂದ್ರ ಸರಕಾರದ ದಬ್ಬಾಳಿಕೆ ನೀತಿಯನ್ನು ಪ್ರತಿಯೊಬ್ಬ ಭಾರತೀಯರು ಖಂಡಿಸಬೇಕಲ್ಲವೇ?












Click it and Unblock the Notifications