ಗಣೇಶಯ್ಯ ಅವರ ಕಥೆ ಸಿನಿಮಾ ಆಗೋದು ಯಾವಾಗ?

By: * ವಿಕಾಸ ಹೆಗಡೆ, ಬೆಂಗಳೂರು
Subscribe to Oneindia Kannada
Sudha Murthy and Dr KN Ganeshaiah
ಇತಿಹಾಸದ ಓದು ಬೋರು ಹೊಡೆಸುತ್ತದೆಯೇ? ವಿಜ್ಞಾನ ವಿಷಯಗಳ ಓದು ಕಷ್ಟ ಅನ್ನಿಸುತ್ತದೆಯೇ? ಕನ್ನಡದಲ್ಲಿ ಹೊಸತರಹದ ಸಾಹಿತ್ಯ ಬರುತ್ತಲೇ ಇಲ್ಲ ಎಂದು ಅನ್ನಿಸಿದೆಯೇ? ಬೌದ್ದಿಕ ಮಟ್ಟವನ್ನು ತಟ್ಟುವ ಕಥಾವಸ್ತುಗಳಿಲ್ಲ ಎಂಬ ಕೊರಗು ಇದೆಯೇ? ಹಾಗಿದ್ದರೆ ಇದಕ್ಕೆಲ್ಲಾ ಪರಿಹಾರ ಕೆ.ಎನ್.ಗಣೇಶಯ್ಯನವರ ಕಾದಂಬರಿಗಳು.

ವಿಶಿಷ್ಟ ಕಥಾವಸ್ತು ಮತ್ತು ಕಥನಶೈಲಿಯಿಂದ ಪ್ರಸಿದ್ಧಿಯಾಗಿರುವವರು ಕೆ. ಎನ್. ಗಣೇಶಯ್ಯ. ಈಗಾಗಲೇ ಅವರ 4 ಕಾದಂಬರಿ ಮತ್ತು 3 ಕಥಾಸಂಕಲನಗಳು ಪ್ರಕಟಗೊಂಡಿವೆ. ನಿನ್ನೆ(ಆ.7) ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರೊ. ರೊದ್ದಂ ನರಸಿಂಹ, ನಾಗೇಶ ಹೆಗಡೆ ಮತ್ತು ಜಿ.ಬಿ. ಹರೀಶ್ ರವರಿಂದ 'ಏಳು ರೊಟ್ಟಿಗಳು' ಮತ್ತು 'ಸಿಗೀರಿಯ' ಎಂಬ ಮತ್ತೆರಡು ಪುಸ್ತಕಗಳು ಬಿಡುಗಡೆಗೊಂಡವು. ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ ಅವರು ಅಭಿಮಾನ ಪೂರ್ವಕವಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಗಣೇಶಯ್ಯ ಅವರ ಕಾದಂಬರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದರ ಜೊತೆ ಅವರ ಹಿಂದಿನ ಕಾದಂಬರಿಗಳಾದ 'ಪದ್ಮಪಾಣಿ ' ಮತ್ತು 'ಕಪಿಲಿಪಿಸಾರದ 'ಮರುಮುದ್ರಣ ಆವೃತ್ತಿಗಳೂ ಬಿಡುಗಡೆಯಾಯಿತು. ಪುಸ್ತಕ ಪ್ರಕಟಿಸಿದ ಅಂಕಿತ ಪ್ರಕಾಶನ ಮಾಲಿಕರಾದ ಪ್ರಕಾಶ ಕಂಬತ್ತಳ್ಳಿಯವರು ಕಾರ್ಯಕ್ರಮ ನಿರೂಪಿಸಿದರು..

ಪ್ರೊ. ರೊದ್ದಂ ನರಸಿಂಹ: 'ಏಳುರೊಟ್ಟಿಗಳು ' ಬಿಡುಗಡೆ ಮಾಡಿ ಮಾತನಾಡಿದ ಪ್ರೊ. ರೊದ್ದಂ ನರಸಿಂಹರು, ಬಹಳ ಕಾಲದಿಂದ ಯಾವುದೇ ಕಾದಂಬರಿ ಓದದೇ ಇದ್ದ ತಮಗೆ ಈ ಕಾದಂಬರಿಯ ಓದು ಬಹಳ ಖುಷಿ ಕೊಟ್ಟಿತು ಎಂದು ತಮ್ಮ ಅನುಭವವನ್ನು ಹೇಳಿಕೊಂಡರು. ಕಾದಂಬರಿಯು ಅತ್ಯಂತ ಸ್ವಾರಸ್ಯಕರವಾಗಿ ನಿರೂಪಿಸಲ್ಪಟ್ಟಿದೆ ಎಂದು ತಿಳಿಸಿದರು. ದಾಖಲಿಸಲ್ಪಟ್ಟ ಇತಿಹಾಸದಿಂದ ಎಲ್ಲವನ್ನೂ ಸರಿಯಾಗಿ ತಿಳಿಯಲು ಸಾಧ್ಯವಿಲ್ಲ.

ಗಣೇಶಯ್ಯನವರ ಕಾದಂಬರಿಗಳು ಆ ಇತಿಹಾಸದ ಹಲವು ಮಜಲುಗಳನ್ನು ಹುಡುಕುತ್ತಾ ಹೋಗುವುದರಿಂದ ಬಹಳ ಪರಿಣಾಮಕಾರಿಯಾಗಿ ಇರುತ್ತವೆ ಎಂದು ಅಭಿಪ್ರಾಯಪಟ್ಟರು. ಇಂತಹ ಅದ್ಭುತ ಕತೆಗಳು ಸಿನೆಮಾಗಳಾಗಬೇಕು ಎಂದು ಅಪೇಕ್ಷೆಪಟ್ಟರು.

ನಾಗೇಶ ಹೆಗಡೆ ಮಾತುಗಳು:'ಸಿಗೀರಿಯ' ಬಿಡುಗಡೆ ಮಾಡಿ ಮಾತನಾಡಿದ ನಾಗೇಶ ಹೆಗಡೆಯವರು ಗಣೇಶಯ್ಯ ಕೇವಲ ಕತೆಗಾರನಾಗಿರದೇ ಒಬ್ಬ ಇತಿಹಾಸಕಾರ, ವಿಜ್ಞಾನಿ, ಅಧ್ಯಯನಕಾರರೂ ಆಗಿರುವುದರಿಂದ ಅವರ ಕಥಾ ವಸ್ತುಗಳು ಓದಿನ ಖುಷಿ ಕೊಡುವುದರ ಜೊತೆ ನಮ್ಮನ್ನು ಹಲವು ದಿಕ್ಕುಗಳಲ್ಲಿ ಯೋಚಿಸುವಂತೆ ಮಾಡುತ್ತವೆ ಎಂದರು.

ಗಣೇಶಯ್ಯನವರು ಬರೆಯುವಾಗ ಆ ಕಥಾವಸ್ತುವಿಗೆ ಸಂಬಂಧಪಟ್ಟ ಹಲವರಿಂದ ನೈಜ ಮಾಹಿತಿ ಪಡೆದು ಬರೆಯುವುದರಿಂದ ಈ ಸಾಹಿತ್ಯವನ್ನು ಒಂದು ರೀತಿ 'ಸಮುದಾಯ ಸಾಹಿತ್ಯ' ವೆಂದು ಕರೆದರು. ಇತಿಹಾಸ ಎನ್ನುವುದು ನಮ್ಮ ಸುತ್ತಮುತ್ತಲೇ ಇರುತ್ತದೆ, ಅದರ ಹುಡುಕಾಟ ಮುಖ್ಯ ಎಂದರು.

ವಿಮರ್ಶಕ ಜಿ.ಬಿ.ಹರೀಶ್ : ಕನ್ನಡದಲ್ಲಿ ಕಾದಂಬರಿ ಪ್ರಾಕಾರವು ಕೊನೆಗೊಳ್ಳುತ್ತಿದೆಯೋ ಎಂಬ ಆತಂಕದಲ್ಲಿದ್ದಾಗ ಈಗಿನ ಶತಮಾನದ ಮೊದಲ ದಶಕದಲ್ಲಿ ಗಣೇಶಯ್ಯ ಮತ್ತಿತರ ಬರಹಗಾರರು ಮತ್ತೆ ಅದಕ್ಕೆ ಯಶಸ್ವಿಯಾಗಿ ಜೀವ ತುಂಬಿದ್ದಾರೆ ಎಂದರು. ಭಾರತ ಮೊದಲಿನಿಂದಲೂ ಕತೆಗಳ ದೇಶ. ನಮಗೆ ವಿಷಯಗಳನ್ನು ಕತೆಯ ರೂಪದಲ್ಲಿ ಹೇಳಿದಾಗ ಮನದಲ್ಲಿ ಸುಲಭವಾಗಿ ಇಳಿಯುತ್ತವೆ.

ಗಣೇಶಯ್ಯನವರ ಕತೆ ಕಾದಂಬರಿಗಳು ವಿಜ್ಞಾನ ಮತ್ತು ಐತಿಹಾಸಿಕ ವಿಷಯಗಳನ್ನು ಕತೆಯ ರೂಪದಲ್ಲಿ ಜನರಿಗೆ ತಲುಪಿಸುತ್ತಿವೆ. ಆಯಾ ಕಾಲಘಟ್ಟದಲ್ಲಿ ಅನಕೃ, ಶಿವರಾಮ ಕಾರಂತರು, ತೇಜಸ್ವಿಯವರು ತಮ್ಮ ಬರಹಗಳ ಮೂಲಕ ಸಾಮಾನ್ಯ ಜನತೆ ಇಂತಹ ಜ್ಞಾನದಿಂದ ಅನಾಥರಾಗದಂತೆ ತಡೆದರು, ಅದನ್ನು ಈಗ ಗಣೇಶಯ್ಯನವರ ಸಾಹಿತ್ಯ ಮುಂದುವರೆಸುತ್ತಿದೆ ಎಂದು ವಿಮರ್ಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಲೇಖಕ ಗಣೇಶಯ್ಯನವರು ತಮ್ಮ ಬರವಣಿಗೆಯ ಕಥಾವಸ್ತುವಿಗೆ ಮತ್ತು ಯೋಚನೆಗೆ ಸ್ಫೂರ್ತಿ ಕೊಟ್ಟ ಸ್ಥಳ, ವಿಚಾರಗಳ ಬಗ್ಗೆ ಮಾಹಿತಿ ಕೊಡುವ ಸ್ಲೈಡ್ ಶೋ ನಡೆಸಿಕೊಟ್ಟರು.

ಕಥಾವಸ್ತು ಹೀಗಿದೆ:

ಏಳುರೊಟ್ಟಿಗಳು: ಹೈದರಾಬಾದನ್ನು ಆಳಿದ ನಿಜಾಮ, ಸ್ವಾತಂತ್ರ್ಯಾನಂತರ ಭಾರತದೊಂದಿಗೆ ವಿಲೀನಗೊಳ್ಳಲಿಚ್ಛಿಸದೆ ಲೋಡುಗಟ್ಟಲೆ ಚಿನ್ನಾಭರಣಗಳೂ ಮತ್ತು ಇತರ ಅಮೂಲ್ಯ ವಸ್ತುಗಳೊಂದಿಗೆ ದೇಶದಿಂದ ಪರಾರಿಯಾಗಲು ಪ್ರಯತ್ನಿಸುತ್ತಾನೆ. ಆದರೆ ಭಾರತ ಸರ್ಕಾರದ ಬಿಗಿ ನಿಯಂತ್ರಣದಿಂದಾಗಿ ಅದು ಸಾಧ್ಯವಾಗುವುದಿಲ್ಲ. ಹಾಗಾದರೆ ನಿಜಾಮ ಒಯ್ಯಲೆತ್ನಿಸಿದ್ದ ಅಪಾರ ನಿಧಿ ಏನಾಯಿತು? ಈ ನಿಧಿಯ ಹುಡುಕಾಟವೇ 'ಏಳು ರೊಟ್ಟಿಗಳು' ಕಾದಂಬರಿಯ ವಸ್ತು.

ಸಿಗೀರಿಯ: ಈ ಪುಸ್ತಕದಲ್ಲಿ ಮೂರು ನೀಳ್ಗತೆಗಳಿವೆ. ಸಿಗೀರಿಯಾ ಎಂಬ ವಿಚಿತ್ರ ಹೆಸರಿನ ಒಂದು ಕತೆ ಶ್ರೀಲಂಕಾ ದೇಶದ ಒಂದು ದುರ್ಗಮ ಬೆಟ್ಟದ ಹೆಸರು. ಈ ಪ್ರದೇಶವನ್ನು ಆಳಿದ್ದ ಭಾರತೀಯ ರಾಜನೊಬ್ಬನ ಕತೆಯನ್ನು ತೆಗೆದುಕೊಂಡು ಇತಿಹಾಸವನ್ನು ಜಾಲಾಡಿದೆ. ಸಿಕ್ಕಿಂ ಪ್ರದೇಶದ ಮತ್ತೊಂದು ಕುತೂಹಲಕಾರಿ ವಿಷಯದ ಕತೆ ಮತ್ತು ಇತಿಹಾಸ ನಮ್ಮ ಸುತ್ತಲೇ ಇದೆ ಎಂಬುದಕ್ಕೆ ಸಾಕ್ಷಿಯಾಗಿ ಲೇಖಕರ ಹುಟ್ಟೂರಾದ ಕೋಲಾರಕ್ಕೆ ಸಂಬಂಧಿಸಿದ, ಆಶ್ಚರ್ಯ ಮೂಡಿಸುವ ಕತೆ ಇದೆ.

ಗಣೇಶಯ್ಯನವರ ಇಂತಹ ಪುಸ್ತಕಗಳನ್ನು ಓದಿದಾಗ ಅನೇಕ ಸ್ಥಳ, ವಿಷಯಗಳ ಬಗ್ಗೆ ನಮ್ಮಲ್ಲಿಯೂ ಹೊಸ ಹುಡುಕಾಟಗಳು ಶುರುವಾಗುವುದು ಖಂಡಿತ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dr. KN Ganeshaiah's 'Elu Rottigalu', 'Sigiriya' book released by Scientist Roddam Narasimha, Writer Nagesh Hegde and GB Harish. Sudha Murthy and other attended the function which held at IIWC, Basavanagudi, Bangalore on Sunday Aug 7.
Please Wait while comments are loading...