ಡಿವಿಎಸ್ ಆಯ್ಕೆ ಹಿಂದಿನ ರಹಸ್ಯ ಬಿಜೆಪಿ ಲೀಕ್ಸ್

ಪಕ್ಷದ ರಾಷ್ಟ್ರೀಯ ಕಚೇರಿಯಿಂದ ಸೋರಿಕೆಯಾದ ಈ ಮಾಹಿತಿಗೆ ಪುಷ್ಟಿ ನೀಡುವಂತೆ ಸ್ವತಃ ಸದಾನಂದ ಗೌಡರೇ ಇಂದು ಬೆಳಗ್ಗೆ ಪ್ರತಿಕ್ರಿಯಿಸಿದ್ದರು. ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ನೀವು ಮುಖ್ಯಮಂತ್ರಿಯಾಗುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸದಾನಂದ ಗೌಡರು, ಹೈಕಮಾಂಡ್ ಸೂಚಿಸಿದರೆ ಎಲ್ಲಕ್ಕೂ ಸಿದ್ಧ ಎಂಬರ್ಥದಲ್ಲಿ ಹೇಳಿದ್ದರು. ಆಗಿನ್ನೂ ಹೈಕಮಾಂಡ್ ಯಡಿಯೂರಪ್ಪ ಅವರ ರಾಜೀನಾಮೆಯನ್ನು ಕೇಳಿರಲಿಲ್ಲ.
ರಾಜೀನಾಮೆ ನೀಡಲು ಸೂಚಿಸುವ ಮೊದಲೇ ಮುಂದಿನ ಸಿಎಂಗೆ ನೀವು ಕೂಡಾ ರೇಸ್ ನಲ್ಲಿದ್ದೀರಾ ಎಂಬುದಕ್ಕೆ ಹೌದು ಎಂಬಂತೆ ಗೌಡರು ಗೋಣು ಹಾಕಿದ್ದರು. ಅಲ್ಲದೆ, ಇದೇ ಪ್ರಶ್ನೆಗೆ ಉತ್ತರಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ಯಡಿಯೂರಪ್ಪ ಅವರು ನಮ್ಮ ನಾಯಕರು ಅವರು ಕೆಳಗಿಳಿದ ಮೇಲಷ್ಟೇ ಪರ್ಯಾಯ ನಾಯಕರ ಆಯ್ಕೆ ವಿಷಯ ಎಂದಿದ್ದರು. ಸಿಡುಕು ಮೋರೆಯ ಉಗ್ರ ಪ್ರತಾಪಿ ಯಡಿಯೂರಪ್ಪ ಅವರು ರಾಜಕೀಯವಾಗಿ ಎಷ್ಟೇ ಸಮರ್ಥರಿದ್ದರೂ ಪಕ್ಷದ ವರ್ಚಸ್ಸಿಗೆ ರಾಷ್ಟ್ರಮಟ್ಟದಲ್ಲಿ ಕಂಟಕರಾಗಿದ್ದರು.
2ಜಿ ಸೆಕ್ಟ್ರಂನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಗೃಹ ಸಚಿವ ಪಿ ಚಿದಂಬರಂ ಅವರು ಹೆಸರನ್ನು ಎ ರಾಜಾ ಪ್ರಸ್ತಾಪಿಸಿರುವುದರಿಂದ ಅವರಿಬ್ಬರ ರಾಜೀನಾಮೆ ಕೇಳಲು ಬಿಜೆಪಿ ಸಿದ್ಧತೆ ನಡೆಸಿದೆ. ಮುಂದಿನ ವಾರ ಆರಂಭವಾಗುವ ಅಧಿವೇಶನಕ್ಕೂ ಮುಂಚೆ ಕರ್ನಾಟಕ ಬಿಜೆಪಿ ಬಿಕ್ಕಟ್ಟು ಪರಿಹರಿಸುವ ಆತುರ ಹೈಕಮಾಂಡ್ ಗೆ ಇತ್ತು.
ಡಿವಿ ಸದಾನಂದ ಗೌಡ ಅವರು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ಎಂದು ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದರೂ, ಅದು ಬಿಜೆಪಿಯದೇ ಒಂದು ತಂತ್ರ ಎಂಬುದು ಹೊರಗಡೆ ಗೊತ್ತಾಗಲಿಲ್ಲ.
ಒಕ್ಕಲಿಗ ಸಮುದಾಯವನ್ನು ಒಗ್ಗೂಡಿಸಿ ರೆಡ್ಡಿ ಬಳಗದ ವಿರುದ್ಧ ದನಿ ಎತ್ತಲು ಸದಾನಂದ ಗೌಡರು ಸಿದ್ಧತೆ ನಡೆಸಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿತ್ತು. ಆದರೆ, ನಂತರ ಎಲ್ಲವೂ ಠುಸ್ ಆಯಿತು. ವಿಶೇಷ ಆಹ್ವಾನಿತ ಸದಸ್ಯರಾಗಿ ನಿತಿನ್ ಗಡ್ಕರಿ ತಂಡ ಸೇರಿದ್ದ ಸದಾನಂದ ಗೌಡರಿಗೆ ಅಂತೂ ಶುಭ ಸುದ್ದಿ ಸಿಕ್ಕಿದೆ.
ಆರೆಸ್ಸೆಸ್ ಪರ ನಿಲುವು ಈಶ್ವರಪ್ಪಗೆ ಮುಳುವಾಯಿತೇ? ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಜಗದೀಶ್ ಶೆಟ್ಟರ್ ಗೆ ಕೈ ಕೊಟ್ಟಿದ್ದು ಯಾರು? ಯಡಿಯೂರಪ್ಪ ಪರ ನಿಂತಿದ್ದ ಸದಾನಂದ ಗೌಡ ಅವಕಾಶವಾದಿಯಾದರೆ? ಎಲ್ಲಕ್ಕೂ ಉತ್ತರ ಹಾಗೂ ವಿಶ್ಲೇಷಣೆಯನ್ನು ನಿರೀಕ್ಷಿಸಿ...












Click it and Unblock the Notifications