ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗಣಿಗಾರಿಕೆ' ವರದಿ ಮಂಡನೆಗೆ ಕ್ಷಣಗಣನೆ; ಬಿಜೆಪಿ ನಡೆಯೇನು!?

By Srinath
|
Google Oneindia Kannada News

CM Yeddyurappa in Tirupathi
ಬೆಂಗಳೂರು, ಜುಲೈ27: ಅಕ್ರಮ ಗಣಿಗಾರಿಕೆ ಕುರಿತಾದ ಲೋಕಾಯುಕ್ತ ವರದಿ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಕ್ಷಣದ ಮಟ್ಟಿಗೆ ರಾಜ್ಯ ರಾಜಕೀಯ ಮಿಸುಕಾಡದೆ, ಮುಸುಕು ಹಾಕಿಕೊಂಡು ಕುಳಿತಿದೆ. ವರದಿಯ ಸಮ್ಮುಖದಲ್ಲಿ ಬಿಜೆಪಿ ನಡೆಯೇನು ಎಂಬುದು ಕೋಟಿ ಪ್ರಶ್ನೆಯಾಗಿದೆ.

ಗಮನಾರ್ಹವೆಂದರೆ 'ಗಣಿಗಾರಿಕೆ' ತೂಗುಕತ್ತಿ ಎದುರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಷ ಮತ್ತು ಸರ್ಕಾರಕ್ಕೆ ಹಾನಿಯಾಗದಂತೆ ಹೇಗೆ ಅಧಿಕಾರದಿಂದ ಪದಚ್ಯುತಿಗೊಳಿಸಬೇಕು ಎಂಬ ಕುರಿತು ಬಿಜೆಪಿ ವರಿಷ್ಠರು ಗಂಭೀರವಾಗಿ ಚರ್ಚಿಸುತ್ತಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸಿರುವ ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಗುರುತರವಾದ ಆರೋಪವಿದ್ದರೆ ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕದಲಿಸುವುದು ಅನಿವಾರ್ಯವಾಗಬಹುದು ಎಂಬ ಅಭಿಪ್ರಾಯವನ್ನು ಬಹಳಷ್ಟು ಬಿಜೆಪಿ ಮುಖಂಡರು ಹೊಂದಿದ್ದಾರೆ.

ಯಡಿಯೂರಪ್ಪ ಸುಲಭವಾಗಿ ರಾಜೀನಾಮೆ ಕೊಡುವರೇ? ಅಕಸ್ಮಾತ್ ಹೈಕಮಾಂಡ್ ತೀರ್ಮಾನವನ್ನು ಧಿಕ್ಕರಿಸಿ ಬಂಡಾಯ ಸಾರುವರೆ? ಇಂಥ ಬಿಕ್ಕಟ್ಟು ಎದುರಾದರೆ ಹೇಗೆ ನಿಭಾಯಿಸಬೇಕು? ಮುಖ್ಯಮಂತ್ರಿ ಮನವೊಲಿಸುವುದು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ವರಿಷ್ಠರು ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಅವರನ್ನು ಬದಲಾವಣೆ ಮಾಡುವ ಪ್ರಸಂಗ ಬಂದರೆ ಅತ್ಯಂತ ಗೌರವದಿಂದ ನಡೆಸಿಕೊಳ್ಳಬೇಕು. ಸಂಘರ್ಷಕ್ಕೆ ಇಳಿಯಬಾರದು ಎಂಬ ಸಲಹೆಯನ್ನು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ನೀಡಿದ್ದಾರೆ. ಒಬ್ಬರೇ ದೆಹಲಿಗೆ ಬಂದು ವರಿಷ್ಠರ ಜತೆ ಚರ್ಚೆ ನಡೆಸುವಂತೆ ರಾಜ್ಯ ಬಿಜೆಪಿ ಪ್ರಮುಖರ ಸಮಿತಿ ಸದಸ್ಯ ಸತೀಶ್ ಮೂಲಕ ಸಂದೇಶ ರವಾನಿಸಲಾಗಿತ್ತು. ಆದರೆ, ಯಡಿಯೂರಪ್ಪ ಕಿವಿಗೊಡದೆ ತಿರುಪತಿಗೆ ತೆರಳಿದ್ದಾರೆ.

ಸೋಮವಾರ ಗಡ್ಕರಿ ಅವರ ಸಮ್ಮುಖದಲ್ಲಿ ಅರುಣ್ ಜೇಟ್ಲಿ ಹಾಗೂ ಅನಂತ ಕುಮಾರ್ ಕರ್ನಾಟಕದ ರಾಜಕೀಯ ವಿದ್ಯಮಾನ ಕುರಿತು ಚರ್ಚಿಸಿದ್ದರು. ಮಂಗಳವಾರವೂ ಗಡ್ಕರಿ, ಜೇಟ್ಲಿ, ವೆಂಕಯ್ಯ ನಾಯ್ಡು ಮತ್ತು ಧರ್ಮೇಂದ್ರ ಪ್ರಧಾನ್ ಸಮಾಲೋಚನೆ ನಡೆಸಿದರು. ಬುಧವಾರ ವರದಿ ಸಲ್ಲಿಕೆಯಾದ ನಂತರ ಸಂಜೆ ಅಡ್ವಾಣಿ ಅವರ ಮನೆಯಲ್ಲಿ ಪಕ್ಷದ ಪ್ರಮುಖರ ಸಭೆ ನಡೆಯಲಿದೆ.

ಈ ಸಭೆ ಲೋಕಾಯುಕ್ತರ ಆರೋಪಗಳ ಸ್ವರೂಪ. ಇದರಲ್ಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರು ಎಷ್ಟರ ಮಟ್ಟಿಗೆ ಭಾಗಿಯಾಗಿದ್ದಾರೆ. ಆರೋಪ ಪುಷ್ಟೀಕರಿಸುವ ದಾಖಲೆಗಳಿವೆಯೇ? ಕಾನೂನು ಹೋರಾಟ ನಡೆಸಿದರೆ ಇದರಿಂದ ಪಾರಾಗಲು ಸಾಧ್ಯವೇ ಎಂಬ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಅಂತಿಮವಾಗಿ ಯಡಿಯೂರಪ್ಪ ಭವಿಷ್ಯ ತೀರ್ಮಾನ ಮಾಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಗೆ ಗಡ್ಕರಿ ಯಾವುದೇ ಭರವಸೆ ನೀಡಿಲ್ಲ. ಅಧಿಕಾರ ಬಿಡುವ ಸಂದರ್ಭ ಬಂದರೆ ಅದಕ್ಕೆ ಮಾನಸಿಕವಾಗಿ ತಯಾರಾಗಿ ಎಂಬ ಕಿವಿ ಮಾತೂ ಹೇಳಿದ್ದಾರೆ. ಇದೇ ವೇಳೆ ರಾಜ್ಯ ಬಿಜೆಪಿ ನಾಯಕರ ಗುಂಪೊಂದು ಈ ಸಂದರ್ಭದ ಲಾಭ ಪಡೆದು ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಗಡ್ಕರಿ ಬಳಿ ಮುಖ್ಯಮಂತ್ರಿ ದೂರಿದ್ದಾರೆ. ಜೇಟ್ಲಿ ಮತ್ತು ವೆಂಕಯ್ಯ ಅವರಿಗೂ ಈ ದೂರು ಮುಟ್ಟಿದೆ.

ಮುಖ್ಯಮಂತ್ರಿ ಜತೆ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಭಾಗಿಯಾಗಿರುವ ಬಳ್ಳಾರಿ ರೆಡ್ಡಿಗಳೂ ಸೇರಿದಂತೆ ಎಲ್ಲ ಸಚಿವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕುವುದು ಅನಿವಾರ್ಯ ಆಗಲಿದೆ. ಮುಖ್ಯಮಂತ್ರಿ ಅವರಿಗಿಂತಲೂ ರೆಡ್ಡಿಗಳ ಮೇಲೆ ಗಂಭೀರವಾದ ಆರೋಪಗಳಿವೆ. ಹೈಕಮಾಂಡ್‌ನಲ್ಲಿ ಕೆಲವರು ಇವರ ರಕ್ಷಣೆಗೆ ನಿಂತಿದ್ದಾರೆ. ಆದರೆ, ಅವರು ತಮ್ಮ ಕಾರ್ಯದಲ್ಲಿ ಯಶಸ್ಸು ಪಡೆಯಲಾರರು ಎಂದೂ ಮೂಲಗಳು ವಿವರಿಸಿವೆ.

English summary
Karnataka Lokayukta Santosh Hegde's much-awaited report on illegal mining will be out today. Will it be an end of road for Karnataka CM Yeddyurappa? What is BJP Move?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X