ಹಾಸನಕ್ಕಾಗಿ ದೇವೇಗೌಡ, ಯಡಿಯೂರಪ್ಪ ಹಸ್ತಲಾಘವ

ಮಾಜಿ ಸಚಿವ ರೇವಣ್ಣ ಮತ್ತಿತರ ಜೆಡಿಎಸ್ ಶಾಸಕರೊಂದಿಗೆ ಸಂಜೆ ಯಡಿಯೂರಪ್ಪನವರನ್ನು ಶುಕ್ರವಾರ ಭೇಟಿ ಮಾಡಿದ ಗೌಡರು ಹಾಸನದ ಸಮಗ್ರ ಅಭಿವೃದ್ಧಿಗಾಗಿ 16 ಅಂಶಗಳ ಬೇಡಿಕೆಗಳನ್ನು ಇಟ್ಟಿದ್ದಾರೆ. ಗೌಡ ಮತ್ತು ರೇವಣ್ಣ ಅವರನ್ನು ಯಡಿಯೂರಪ್ಪ, ಆರ್ ಅಶೋಕ್, ಮುಂತಾದವರು ನಗುಮೊಗದಿಂದಲೇ ಬರಮಾಡಿಕೊಂಡರು.
ಕೆಲ ದಿನಗಳ ಹಿಂದೆ ದೇವೇಗೌಡ ಮತ್ತು ಕುಟುಂಬದವರು 1500 ಕೋಟಿ ರು. ಅಕ್ರಮ ಸಂಪತ್ತು ಪೇರಿಸಿದ್ದಾರೆ ಎಂದು ಆರೋಪಿಸಿ ಯಡಿಯೂರಪ್ಪ ಚಾರ್ಜ್ ಶೀಟ್ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಈ ಮುಖಾಮುಖಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಧರ್ಮಸ್ಥಳಕ್ಕೆ ಜೂ.27ರಂದು ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಭೇಟಿ ನೀಡಿದ ದಿನ ದೇವೇಗೌಡರು ಯಡಿಯೂರಪ್ಪನವರ ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸದೆದಿರು ಧರಣಿ ನಡೆಸಿದ್ದರು. ಯಡಿಯೂರಪ್ಪ ಹಾಸನ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ನಿರಶನ ಹೂಡಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಸನ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್, ಹಾಸನ ಉಸ್ತುವಾರಿ ಸಚಿವ ಸೋಮಣ್ಣ, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅಂಜನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಹಾಸನದಲ್ಲಿ ನರ್ಸಿಂಗ್ ಕಾಲೇಜು ಸ್ಥಾಪನೆ, ರಸ್ತೆ ಅಭಿವೃದ್ಧಿ ಕಾಮಗಾರಿ ಮುಂತಾದ ವಿಷಯಗಳ ಬೇಡಿಕೆಯನ್ನು ಗೌಡರು ಸರಕಾರದ ಮುಂದಿಟ್ಟಿದ್ದಾರೆ. ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ, ಖಂಡಿತ ಅಭಿವೃದ್ಧಿ ಕಾರ್ಯ ನಡೆಸುವುದಾಗಿ ಯಡಿಯೂರಪ್ಪನವರು ದೇವೇಗೌಡರಿಗೆ ಭರವಸೆ ನೀಡಿದ್ದಾರೆ.
ಈ ನಡುವೆ, 1500 ಕೋಟಿ ರು. ಆರೋಪ ಮಾಡಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸುತ್ತಿರುವ ಕುಮಾರಸ್ವಾಮಿ ಜು.9ರಿಂದ ಫ್ರೀಡಂ ಪಾರ್ಕ್ ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.












Click it and Unblock the Notifications