ಭಾರದ್ವಾಜ್ ಎತ್ತಂಗಡಿ ಸನ್ನಿಹಿತ: ಮಾರ್ಗರೆಟ್ ಗೆ ಉಸ್ತುವಾರಿ

ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಂಘರ್ಷ ಹೊಂದಿರುವ ಭಾರದ್ವಾಜ್ ಅವರನ್ನು ಉತ್ತರ ಭಾರತದ ಯಾವುದಾದರೂ ರಾಜ್ಯಕ್ಕೆ ಬದಲಾಯಿಸುವ ಸಂಭವವಿದೆ. ಉತ್ತರಾಖಂಡ ರಾಜ್ಯಪಾಲರಾದ ಮಾರ್ಗರೆಟ್ ಆಳ್ವ ದಕ್ಷಿಣಕ್ಕೆ ಬರುವ ಇಂಗಿತದಲ್ಲಿದ್ದಾರೆ.
ಈ ತಿಂಗಳು ಅಧಿಕಾರ ಕೊನೆಗೊಳಿಸುವ ತಮಿಳುನಾಡು ರಾಜ್ಯಪಾಲ ಸುರ್ಜಿತ್ ಸಿಂಗ್ ಬರ್ನಾಲ ಸ್ಥಾನಕ್ಕೆ ಅವರನ್ನು ಬದಲಾಯಿಸುವ ನಿರೀಕ್ಷೆಯಿದೆ. ಮಾರ್ಗರೆಟ್ ಆಳ್ವ ಅವರಿಗೆ ಹೆಚ್ಚುವರಿ ಹೊಣೆಯಾಗಿ ಕರ್ನಾಟಕ ಉಸ್ತುವಾರಿಯನ್ನೂ ನೀಡುವ ಆಲೋಚನೆ ನಡೆದಿದೆ. ಈ ಮಧ್ಯೆ, ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಅವರು ದಕ್ಷಿಣಾಭಿಮುಖವಾಗುವ ಲಕ್ಷಣಗಳು ಹೆಚ್ಚಾಗಿವೆ.
ಕರ್ನಾಟಕದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಮತ್ತು ಪಂಜಾಬ್ ರಾಜ್ಯಪಾಲ ಶಿವರಾಜ್ ಪಾಟೀಲ್ ಅವರಂತಹವರು ಕೇಂದ್ರ ಮಟ್ಟದಲ್ಲಿ ಪ್ರಮುಖ ಸ್ಥಾನವನ್ನು ಅಲಂಕರಿಸುವ ಭರವಸೆ ಹೊಂದಿದ್ದರೂ, ಸದ್ಯಕ್ಕೆ ಇವರನ್ನು ಬೇರೆಡೆ ನಿಯೋಜಿಸುವ ಸಂಭವವಿದೆ. ಏಕೆಂದರೆ ಈಗಾಗಲೇ ಆಡಳಿತಾರೂಢ ಯುಪಿಎಯಲ್ಲಿ ಹಲವು ಆಕಾಂಕ್ಷಿಗಳು ಸಚಿವರಾಗುವ ವಿಶ್ವಾಸದಲ್ಲಿದ್ದಾರೆ. ಅನೇಕ ಹಿರಿಯರನ್ನು ಪಕ್ಷದ ಕಾರ್ಯಕ್ಕೆ ನಿಯೋಜಿಸಿ, ಯುವಕರಿಗೆ ಸಂಪುಟದಲ್ಲಿ ಆದ್ಯತೆ ನೀಡಲು ವರಿಷ್ಠರು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಶಿವರಾಜ್ ಪಾಟೀಲ್ ಆಯ್ಕೆ ಬಯಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಡನೆ ಶೀತಲ ಸಮರ ಹೊಂದಿರುವ ರಾಜ್ಯಪಾಲ ದೇವಾನಂದ ಕೊನ್ವಾರ್ ಅವರನ್ನು ಸಹ ಬೇರೆಡೆಗೆ ವರ್ಗಾಯಿಸುವ ಸಾಧ್ಯತೆಯಿದೆ.
ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಗೃಹ ಸಚಿವ ಚಿದಂಬರಂ, ಪರಿಸರ ಸಚಿವ ಜೈರಾಂ ರಮೇಶ್, ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಖಾತೆಗಳು ಬದಲಾಗುವ ನಿರೀಕ್ಷೆಯಿದೆ. ಜವಳಿ ಸಚಿವ ದಯಾನಿಧಿ ಮಾರನ್ ಮತ್ತು ಕಾರ್ಯಕ್ರಮ ಜಾರಿ ಸಚಿವ ಎಂ.ಎಸ್. ಗಿಲ್ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಹೆಚ್ಚುವರಿ ಖಾತೆ ಹೊಂದಿರುವ ಸಚಿವ ಕಪಿಲ್ ಸಿಬಲ್ ಅವರ ಹೊಣೆಗಾರಿಕೆ ಕಡಿಮೆಯಾಗುವ ಸಂಭವವಿದೆ.












Click it and Unblock the Notifications