ಒಂದು ಕೈಯಿಂದ ಚಪ್ಪಾಳೆ ತಟ್ಟಲಾಗದು: ಧರ್ಮಾಧಿಕಾರಿ ಹೆಗ್ಗಡೆ

ಈ ಮಧ್ಯೆ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು 'ಯಾವುದೇ ಒಬ್ಬ ವ್ಯಕ್ತಿ ತಾನೊಬ್ಬನೇ ದೇವರ ಎದುರು ನಿಂತು ಅವರ ಸತ್ಯವನ್ನು ಬಿನ್ನವಿಸಿದರೆ ಅದು ಪ್ರಮಾಣ ಆಗುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ.
ಶ್ರೀಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾನು ದೇವರ ಎದುರು ನಿಂತು ಸತ್ಯ ನಿವೇದನೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಅದು ಪ್ರಮಾಣವಾಗುವುದಿಲ್ಲವೇ ಎಂದು ಕೇಳಿದಾಗ, 'ದೇವರ ಬಳಿ ಯಾವುದೇ ಭಕ್ತ ತನ್ನ ಸಂಕಷ್ಟವನ್ನು ತೋಡಿಕೊಳ್ಳಬಹುದು. ಭಕ್ತರು ಮತ್ತು ದೇವರ ನಡುವಿನ ಸಂಬಂಧಕ್ಕೆ ಯಾರೂ ಅಡ್ಡಿಯಾಗಲಾರರು. ಆದರೆ ಅಷ್ಟಕ್ಕೇ, ಒಬ್ಬನೇ ಬಂದು ದೇವರೆದುರು ಬಿನ್ನವಿಸುವುದು ಪ್ರಮಾಣವಾಗುವುದಿಲ್ಲ' ಎಂದಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಬ್ಬರೂ ಬಂದು ದೇವರ ದರ್ಶನ ಮಾಡಿ ರಾಜ್ಯದ ಜನತೆಯ ಒಳಿತಿಗಾಗಿ ಪ್ರಾರ್ಥಿಸುವುದಾಗಿ ಹೇಳಿರುವುದು ಸಂತಸ ತಂದಿದೆ.
ಕುಮಾರಸ್ವಾಮಿಯವರು ಪ್ರಮಾಣ ಮಾಡವುದಾಗಿ ತನ್ನ ಬಳಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ ಹೆಗ್ಗಡೆ, ಪ್ರಮಾಣ ಎಂದಾದರೆ ಎರಡು ಕಡೆಯವರು ಕ್ಷೇತ್ರಕ್ಕೆ ಮೊದಲೇ ತಿಳಿಸಿ ಬರಬೇಕು. ಕುಮಾರಸ್ವಾಮಿಯವರು ತನಗೆ ಬರೆದ ಪತ್ರ ಖಾಸಗಿಯಾಗಿದ್ದು ಅದನ್ನು ಮಾಧ್ಯಮಗಳ ಬಳಿ ಚರ್ಚಿಸಲಾರೆ. ಆದರೆ ಅವರು ಮಾಧ್ಯಮದ ಬಳಿ ಅದನ್ನು ಹೇಳುವುದಕ್ಕೆ ತನ್ನ ಅಭ್ಯಂತರ ಇಲ್ಲ. ಅವರ ಭಾವನೆಗಳನ್ನು ತನ್ನ ಬಳಿ ಹೇಳಿಕೊಂಡಿದ್ದಾರೆ. ಅದೇನೂ ಗುಪ್ತ ವಿಷಯ ಅಲ್ಲ. ಆತ್ಮ ನಿವೇದನೆ ಮಾಡಿಕೊಂಡಿದ್ದಾರೆ.












Click it and Unblock the Notifications