ಆಣೆ ಪ್ರಮಾಣ ಅಧಿಕೃತವಾಗಿ ರದ್ದಾದರೂ ಇಳಿಯದ ಕಾವು

ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಆಣೆ ಪ್ರಮಾಣವನ್ನು ಕೈಬಿಡಲು ತಾಕೀತು ಮಾಡಿರುವುದರಿಂದ ಮತ್ತು ಮಠಾಧಿಪತಿಗಳು ಹಿತವಚನ ನೀಡಿದ್ದರಿಂದ ಆಣೆ ಪ್ರಮಾಣವನ್ನು ಕೈಬಿಟ್ಟಿರುವುದಾಗಿ ಯಡಿಯೂರಪ್ಪ ಇಂದು ರಾಯಚೂರಿನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಿತೀನ್ ಗಡ್ಕರಿ ಅವರು ಬೆಂಗಳೂರಿಗೆ ಬಂದಿದ್ದಾಗ ಇದರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ವೀರೇಂದ್ರ ಹೆಗ್ಗಡೆ ಮನವಿ : ಇಬ್ಬರೂ ನಾಯಕರು ಧರ್ಮಸ್ಥಳಕ್ಕೆ ಸೋಮವಾರ ಬರುತ್ತಿರುವುದು ಸ್ವಾಗತ. ಅದರೆ, ಕುಟುಂಬ, ಶಾಸಕರು ಮತ್ತು ಕಾರ್ಯಕರ್ತರ ದಂಡನ್ನು ಕರೆತರದೆ ಮಿತಸಂಖ್ಯೆಯಲ್ಲಿ ಬರಬೇಕೆಂದು ಇಬ್ಬರಿಗೂ ಮನವಿ ಮಾಡಿದ್ದಾರೆ. ಕ್ಷೇತ್ರದ ಪಾವಿತ್ರ್ಯವನ್ನು ಕಾಪಾಡಲು ಸಹಕರಿಸಬೇಕು ಎಂದು ತಿಳಿಸಿದ್ದಾರೆ. ಯಡಿಯೂರಪ್ಪನವರು ಕೂಡ, ಕುಟುಂಬ ಸಮೇತರಾಗಿ ಹೋಗದೆ, ಕೆಲ ಶಾಸಕರೊಂದಿಗೆ ಹೋಗುತ್ತಿರುವುದಾಗಿ ಹೇಳಿದ್ದಾರೆ.
ಕುಮಾರಸ್ವಾಮಿಯವರ ಧರ್ಮಸ್ಥಳ ಪ್ರವಾಸ ಮಾತ್ರ ಭಾನುವಾರದಿಂದಲೇ ಭರ್ಜರಿಯಾಗಿ ಆರಂಭವಾಗುತ್ತಿದೆ. ಬೆಳಿಗ್ಗೆ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ. ಭಾನುವಾರ ಸಂಜೆ ಕುಮಾರಸ್ವಾಮಿ ಪಟಾಲಂ ಧರ್ಮಸ್ಥಳ ತಲುಪಲಿದೆ. ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ 800 ಪೊಲೀಸರನ್ನು ನಿಯೋಜಿಸಲಾಗುತ್ತಿದೆ.
ಈ ನಡುವೆ, ಇದೇ ದಿನ ಜೂ. 27ರಂದು ಮುಖ್ಯಮಂತ್ರಿಯವರ ನಿವಾಸದೆದಿರು ಮಾಜಿ ಪ್ರಧಾನಿ ದೇವೇಗೌಡರು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿದ್ದಾರೆ. ಹಾಸನ ಜಿಲ್ಲೆಯ ಅಭಿವೃದ್ಧಿಯನ್ನು ಬಿಜೆಪಿ ಕಡೆಗಣಿಸಿದೆ ಎಂದು ಆರೋಪಿಸಿ ಅವರು ಸತ್ಯಾಗ್ರಹಕ್ಕೆ ಕೂಡಲಿದ್ದಾರೆ. ಪೊಲೀಸಿನವರು ನನ್ನನ್ನು ಬಂಧಿಸಿದರೂ ಚಿಂತೆಯಿಲ್ಲ, ಧರಣಿ ಕೂಡಿಯೇ ತೀರುತ್ತೇನೆ ಎಂದು ಸಾರಿದ್ದಾರೆ.












Click it and Unblock the Notifications