ಸಿಎಂ, ಮಾಜಿ ಸಿಎಂ ಸಾಮಾನ್ಯ ಭಕ್ತರಂತೆ ಬರಲಿ: ಹೆಗ್ಗಡೆ

"ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಸಾಮಾನ್ಯ ಭಕ್ತರಂತೆ ಕ್ಷೇತ್ರಕ್ಕೆ ಬರಲಿ. ಮಂಜುನಾಥ, ಅಣ್ಣಪ್ಪಸ್ವಾಮಿಯ ಮುಂದೆ ಎಲ್ಲರೂ ಒಂದೇ. ಕ್ಷೇತ್ರಕ್ಕೆ ಬರುವ ಬಗ್ಗೆ ಎರಡೂ ಬಣದಿಂದ ಇದುವರೆಗೆ ಅಧಿಕೃತ ಮಾಹಿತಿ ಬಂದಿಲ್ಲ. ವಾಕ್ ಸತ್ಯ ಪ್ರಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು, ಆ ಸಮಯದಲ್ಲಿ ನಾನೂ ಅಲ್ಲಿ ಉಪಸ್ಥಿತನಿರುತ್ತೇನೆ" ಎಂದರು.
"ಪ್ರಮಾಣಕ್ಕೆ ಬಂದ ಉಭಯ ಬಣದವರು ನೇತ್ರಾವತಿಯಲ್ಲಿ ಸ್ನಾನ ಮಾಡಿ ದೇವರಿಗೆ 11 ರೂಪಾಯಿ ಕಾಣಿಕೆ ಹಾಕಿ ಮಂಜುನಾಥನ ಎದುರು ನಿಂತು "ನಾನು ಸತ್ಯವನ್ನೇ ಹೇಳುತ್ತೇನೆ, ನಾನು ಸುಳ್ಳು ಹೇಳಿದರೆ ಸೂಕ್ತ ಶಿಕ್ಷೆ ನೀಡು" ಎಂದು ಪ್ರಮಾಣ ಮಾಡಬೇಕೆಂದು ಹೆಗ್ಗಡೆಯವರು ತಿಳಿಸಿದ್ದಾರೆ.
"ಮಾತು ಬಿಡ ಮಂಜುನಾಥ" ಎನ್ನುವ ನಂಬಿಕೆ ಇಲ್ಲಿ ದೊಡ್ಡದು. ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡುವ ಮೊದಲು ಸಾಕಷ್ಟು ಎಚ್ಚರ ವಹಿಸಲಿ. ಅವರು ಮಾಡುವ ಪ್ರಮಾಣ ಮತ್ತು ಮಂಜುನಾಥನ ಮಧ್ಯೆ ಧರ್ಮಾಧಿಕಾರಿಯಾಗಿ ನಾನು ಸಾಕ್ಷಿಯಾಗಿರುವುದೇ ಹೊರತು ಸರಿಯೋ ತಪ್ಪೋ ಎಂದು ವಿಮರ್ಶೆ ಮಾಡುವುದಿಲ್ಲ" ಎಂದು ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದ್ದಾರೆ.
"ನಾವಾಗಿ ಅವರನ್ನು ಆಮಂತ್ರಿಸಲಿಲ್ಲ, ಸಾಮಾನ್ಯ ಭಕ್ತರಂತೆ ಅವರು ಕ್ಷೇತ್ರಕ್ಕೆ ಬರಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಯಾವುದೇ ವ್ಯವಹಾರದಲ್ಲಿ ಸರಿಯಾದ ನ್ಯಾಯ ಸಿಗದಾಗ 'ದೇವರು ಸತ್ಯದ ವಿಮರ್ಶೆ ಮಾಡಿ, ಮಂಜುನಾಥ ನ್ಯಾಯ ಕೊಡಲಿ' ಎಂದು ಪ್ರಾರ್ಥಿಸುವುದು ಆಣೆಮಾತು. ವಚನ ಭ್ರಷ್ಟರಾದರೆ ಇದೆ ಶಾಪವಾಗಿ ಪರಿಣಮಿಸಿ ಮುಂದೆ ಅನೇಕ ಕಷ್ಟ ನಷ್ಟ ಎದುರಿಸಬೇಕಾಗುತ್ತದೆ ಎನ್ನುವ ಪ್ರತೀತಿ ನಂಬಿಕೆ ನಮ್ಮಲ್ಲಿದೆ" ಎಂದು ಹೆಗ್ಗಡೆ ಹೇಳಿದ್ದಾರೆ.












Click it and Unblock the Notifications