ಧರ್ಮಸ್ಥಳದಲ್ಲಿ ಏನಂತ ಆಣೆ ಮಾಡಲಿದ್ದಾರೆ ಅಂದರೆ...

ಯಡಿಯೂರಪ್ಪ ಅವರು ವಿಶ್ರಾಂತಿ ಬಯಸಿ ಕೊಟ್ಟಕಲ್ ಆಸ್ಪತ್ರೆಯಲ್ಲಿ ಇನ್ನೂ ಸರಿಯಾಗಿ ಕಾಲಿಟ್ಟಿರಲಿಲ್ಲ. ಆಗಲೇ 'ತಮ್ಮ ಭ್ರಷ್ಟಾಚಾರಗಳನ್ನು ಗುಪ್ತವಾಗಿಡಲು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ನೋರು ತಮ್ಮ ಬಂಟ ಲೆಹರ್ ಸಿಂಗ್ ಮೂಲಕ ರಾಜಿ ಸಂಧಾನಕ್ಕೆ ಯತ್ನಿಸಿದ್ದರು' ಎಂದು ಎಚ್ ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದರು. ವಿಶ್ರಾಂತಿ ಹಾಗಿರಲಿ ಯಡಿಯೂರಪ್ಪನವರ ನೆಮ್ಮದಿಯೂ ಪಾತಾಳ ಕಚ್ಚಿತು.
ಸ್ವತಃ ಲೆಹರ್ ಸಿಂಗ್ ಸೇರಿದಂತೆ ಬಿಜೆಪಿಯ ಅನೇಕ ನಾಯಕರು 'ಕುಮಾರ ಸಂಧಾನ'ಕ್ಕೆ ಇಲ್ಲ-ಬೆಲ್ಲ ಎಂದು ಸ್ಪಷ್ಟೀಕರಣ ಕೊಡುತ್ತಾ ಬಂದರಾದರೂ ಎಚ್ ಡಿಕೆ ಸುತಾಂ ಜಗ್ಗಲಿಲ್ಲ. ಇಲ್ಲ, ಇಲ್ಲ. ಯಡಿಯೂರಪ್ನೋರು ರಾಜಿ ಸಂಧಾನಕ್ಕೆ ಯತ್ನಿಸಿದ್ದರು ಅಂತಲೇ ಪಟ್ಟು ಹಿಡಿದರು. ಆಗ ಸಾಕ್ಷಾತ್ ಯಡಿಯೂರಪ್ಪನವರೇ ರಂಗಕ್ಕೆ ಇಳಿದರು.
ಎಚ್ ಡಿ ಕುಮಾರಸ್ವಾಮಿಗಳೇ, ನಿಮ್ಮದೆಲ್ಲ ಹಿಟ್ ಅಂಡ್ ರನ್ ಕೇಸ್ ಎಂದು ವರ್ತಮಾನ ಪತ್ರಿಕೆಗಳ ಮೂಲಕ ಜೂನ್ 18ರಂದು ಸರಕಾರಿ ಸವಾಲು ಎಸೆದರು. ಬನ್ನಿ, ಧರ್ಮಸ್ಥಳಕ್ಕೆ ಎಂದು ಕುಮಾರಸ್ವಾಮಿಗೆ ಪಂಥಾಹ್ವಾನ ನೀಡಿದ ಬಿಎಸ್ ವೈ ಮಂಜುನಾಥನ ಮೇಲೆ ಆಣೆ ಮಾಡಿ ಎಂದರು. ಆದರೆ, ಸ್ವತಃ ಮುಖ್ಯಮಂತ್ರಿಯೇ ಪತ್ರಿಕಾ ಜಾಹೀರಾತಿಗೆ ಒಂದು ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಸುರಿದಿದ್ದು, ಬೆಂಕಿಗೆ ತುಪ್ಪ ಸುರಿದಂತಾಗಿತ್ತು. 'ಇಷ್ಟಕ್ಕೂ, ಜಾಹಿರಾತಿಗೆ ದುಡ್ಡು ಯಾರದು ಯಡ್ಡಿಯೂರಪ್ಪ' ಎಂದು ಜನ ಯಕಾಮಕಾ ಕೇಳತೊಡಗಿದರು.
ಸೋ, ಹಾಗೆ ಆರಂಭ ಪಡೆದ ಆಣೆ-ಪ್ರಮಾಣ ಪ್ರಹಸನ ಮುಂದೆ ಭಾರಿ ಬೀದಿ ರಂಪಕ್ಕೆ ಹಾದಿಯಾಯಿತು. ಈ ಮಧ್ಯೆ, ಕುಮಾರ ಸಂಧಾನ ವಿಷಯ ಮರೆತುಹೋಯಿತೇ ಎಂದು ಕೇಳುವಂತಾಯಿತು. ಹಾಗಾಗಿಯೇ ಈಗ 'ಇಷ್ಟಕ್ಕೂ ಯಡಿಯೂರಪ್ಪ ಮತ್ತು ಎಚ್ ಡಿಕೆ ಜೋಡಿ ಏನಂತ ಆಣೆ ಪ್ರಮಾಣ ಮಾಡಲಿದ್ದಾರೆ?' ಎಂಬ ಕವಡೆ ಕಿಮ್ಮತ್ತಿನ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಉತ್ತರ ಸ್ಪಷ್ಟ ...
ಮಂಜುನಾಥನ ಮೇಲಾಣೆ, ಮೇಲ್ಮನೆಯ ಹಿರಿಯ ಸದಸ್ಯ ಲೆಹರ್ ಸಿಂಗ್ ಅವರ ಮೂಲಕವಾಗಲಿ ಅಥವಾ ಇನ್ಯಾವುದೇ ಮಾರ್ಗದಲ್ಲಿ ಕುಮಾರ ಸಂಧಾನಕ್ಕೆ ನಾನು ಯತ್ನಿಸಿಲ್ಲ ಎಂದು ಶ್ರೀಮಾನ್ ಯಡಿಯೂರಪ್ಪನವರು ಪ್ರಮಾಣ ಮಾಡಲಿದ್ದಾರೆ. ಇದೇ ವೇಳೆ, 'ಮಂಜುನಾಥನ ಮೇಲಾಣೆ, ಈ ಹಿಂದೆ ನಾನು ಹೇಳಿದಂತೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಬಲಗೈ ಬಂಟ ಲೆಹರ್ ಸಿಂಗ್ ಮೂಲಕ ನನ್ನೊಂದಿಗೆ ರಾಜಿ ಸಂದಾನಕ್ಕೆ ಯತ್ನಿಸಿದ್ದರು' ಎಂದು ಸನ್ಮಾನಕುಮಾರಸ್ವಾಮಿ ಅವರು ಪ್ರಮಾಣ ಮಾಡಬೇಕಾಗಿದೆ.
ಇದಕ್ಕೆ ಜೂನ್ 27ರಂದು ಮಂಜುನಾಥನಿಗೆ ಪ್ರಶಸ್ತವಾದ ಸೋಮವಾರದಂದು ಮಹೂರ್ತವೂ ನಿಗದಿಯಾಗಿದೆ. ಅಥವಾ ಚಿತ್ರದಲ್ಲಿರುವಂತೆಯೇ ಇಬ್ಬರೂ ಧೀಮಂತ ನಾಯಕರು ಕೈಯೆತ್ತಿ ಜನರನ್ನು ಮಂಗ್ಯಾ ಮಾಡ್ತಾರೋ, ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದೆ.












Click it and Unblock the Notifications