ಕನ್ನಡ ಭಾಷಾಂತರಕಾರರಿಗೆ ಗೂಗಲ್ ನಿಂದ ಅನ್ಯಾಯ

ಕನ್ನಡ ಸೇರಿದಂತೆ ಆರು ಭಾಷೆಗಳಿಗೆ ತರ್ಜುಮೆ ಮಾಡುವ ಯೋಜನೆಯನ್ನು ಗೂಗಲ್ ಕಂಪೆನಿಯವರು ನಗರದ ಕೆಲವು ಸಾಫ್ಟ್ ವೇರ್ ಕಂಪೆನಿಯವರಿಗೆ ನೀಡಿದ್ದರು. ತಿಂಗಳೊಂದರಲ್ಲಿ ಪ್ರತಿ ಕಂಪೆನಿಗಳು ಸುಮಾರು ಎರಡು ಲಕ್ಷ ಪದಗಳನ್ನು ತರ್ಜುಮೆ ಮಾಡುವ ದೊಡ್ಡ ಪ್ರಾಜೆಕ್ಟ್ ಇದು. ಶಬ್ದವೊಂದರ ತರ್ಜುಮೆಗೆ 2 ರುಪಾಯಿ ಕೊಡುತ್ತಿದ್ದಾರೆ. ಆದರೆ ಈ ಸಾಫ್ಟ್ ವೇರ್ ಕಂಪೆನಿಗಳು ಕನ್ನಡ ಭಾಷಾಂತರಕಾರರಿಗೆ ಶಬ್ದವೊಂದಕ್ಕೆ ಕೇವಲ 50-60 ಪೈಸೆ ಕೊಟ್ಟು ಅಥವಾ ಆ ಲೆಕ್ಕದಲ್ಲಿ ನೇಮಿಸಿಕೊಂಡು ಕಾರ್ಯ ಪೂರೈಸಿದ್ದಾರೆ.
ತಮಿಳು ಭಾಷಾಂತರಕಾರರಿಗೆ ಮಾತ್ರ ಕನ್ನಡಕ್ಕಿಂತ ಹೆಚ್ಚಿನ ಹಣ ಕೊಡುತ್ತಿದ್ದಾರೆ. ಒತ್ತಕ್ಷರಗಳಿಲ್ಲದ ತಮಿಳು ಭಾಷೆಯ ಭಾಷಾಂತರ ಕೆಲಸ ವೇಗವಾಗಿ ಸಾಗುತ್ತದೆ. ಕನ್ನಡ ಭಾಷೆಯಲ್ಲಿ ದಿನವೊಂದಕ್ಕೆ 1600-1800 ಪದಗಳನ್ನು ಸಾಧಾರಣವಾಗಿ ತರ್ಜುಮೆ ಮಾಡಿದರೆ, ಇಷ್ಟೇ ಶ್ರಮದಲ್ಲಿ ತಮಿಳು ಭಾಷೆಯ 2500ಕ್ಕೂ ಹೆಚ್ಚು ಶಬ್ದಗಳನ್ನು ತರ್ಜುಮೆ ಮಾಡಬಹುದಾಗಿದೆ. ಈ ಪ್ರಾಜೆಕ್ಟ್ ಕನ್ನಡ ನೆಲದಲ್ಲಿಯೇ ನಡೆಯುತ್ತಿದ್ದರೂ ಕನ್ನಡ ಭಾಷಾಂತರಕಾರರಿಗೆ ಅನ್ಯಾಯ ಆಗುತ್ತಿದೆ.
ಭಾಷಾಂತರಕಾರರಿಗೆ 'ಕೈ ತುಂಬ ಕೆಲಸ ಅದಕ್ಕೆ ತಕ್ಕಂತೆ ಹಣ' ಸಿಗುವುದು ಅಪರೂಪ. ಅಂಥ ಅವಕಾಶ ಸಿಕ್ಕಿತ್ತು ಎಂದು ಸಂತೋಷ ಪಡುವ ಬೆನ್ನಲ್ಲೇ, ಸಾಫ್ಟ್ ವೇರ್ ಕಂಪೆನಿಗಳು ಈ ಅವಕಾಶದ ಲಾಭವನ್ನು ಪಡೆಯುತ್ತಿದ್ದಾರೆ. ಭಾಷಾಂತರ ಕಾರ್ಯಕ್ಕೆ ಎರಡೂ ಭಾಷೆಯಲ್ಲಿ ಪರಿಣಿತಿ, ಸಾಮಾನ್ಯ ಜ್ಞಾನ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮಧ್ಯವರ್ತಿ ಸಾಫ್ಟ್ ವೇರ್ ಕಂಪೆನಿಯವರಿಗೆ ದುಡಿದು ಕೊಡಬೇಕಾಗಿದೆ.
ಪ್ರಾಜೆಕ್ಟ್ ಮ್ಯಾನೇಜರ್ ಗಳಿಗೆ ಭಾಷಾಂತರ ಸೂಕ್ಷ್ಮತೆಯಾಗಲಿ ಅದರ ಆಳವಾಗಲಿ ಅರಿವಿರುವುದಿಲ್ಲ. ಭಾಷಾಂತರ ಶ್ರಮದ ಅರಿವು ಮೊದಲೇ ಇರುವುದಿಲ್ಲ. ಗೂಗಲ್ ಸಂಸ್ಥೆ ಯವರು ಈ ಸಾಫ್ಟ್ ವೇರ್ ಕಂಪೆನಿಯವರಿಗೆ ಈ ಪ್ರಾಜೆಕ್ಟ್ ವಹಿಸಿಕೊಡುವ ಬದಲು ತಾವೇ ಒಂದು ನೂರಿನ್ನೂರು ಭಾಷಾಂತರಕಾರರನ್ನು ನೇಮಿಸಿಕೊಂಡು ಅರ್ಹ ಸಂಬಳ ಕೊಟ್ಟಿದ್ದಲ್ಲಿ ಮಧ್ಯವರ್ತಿಗಳ ಹಾವಳಿಯಿಲ್ಲದೆ ಮೂಲ ಕಾರಣಕರ್ತರಿಗೆ ಹಣ ದೊರಕುತ್ತಿತ್ತು.
ಎಲ್ಲಾ ಲೆಕ್ಕಾಚಾರದಂತೆ ಗೂಗಲ್ ಸಂಸ್ಥೆಗೆ ಲಾಭವಾಗುತ್ತಿತ್ತು. ಭಾಷಾಂತರಕಾರರಿಗೆ ಶೋಷಣೆ, ವೇತನದಲ್ಲಿ ವ್ಯತ್ಯಯ ತಪ್ಪುತ್ತಿತ್ತು. ಗೂಗಲ್ ಕಂಪೆನಿ ಈ ಬಗ್ಗೆ ಆದಷ್ಟು ಬೇಗ ಗಮನಹರಿಸುತ್ತದೆ. ಕನ್ನಡ ಭಾಷಾಂತರಕಾರರಿಗೆ ಆಗಿರುವ ಅನ್ಯಾಯ ಸರಿಪಡಿಸುತ್ತದೆ ಎಂಬ ನಿರೀಕ್ಷೆಯಲ್ಲಿ ನೊಂದ ಭಾಷಾಂತರಕಾರರು ಇದ್ದಾರೆ.












Click it and Unblock the Notifications