ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿ ಅಂಜನೇಯ ಬಂದಿ

ಹಾಗೆ ನೋಡಿದರೆ ಮೈಸೂರಿನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಗಳ ಪೈಕಿ ಚಿಕ್ಕ ಆಂಜನೇಯ ದೇವಾಲಯವೂ ಒಂದಾಗಿದೆ. ಇಲ್ಲಿಗೆ ಹಲವಾರು ಭಕ್ತರು ದಿನನಿತ್ಯ ಆಗಮಿಸಿ ಪೂಜೆ ಪುನಸ್ಕಾರವನ್ನು ಮಾಡಿಸಿಕೊಂಡು ಹೋಗುತ್ತಾರೆ. ಇದೀಗ ಎರಡು ಕುಟುಂಬಗಳ ನಡುವೆ ಪೂಜೆ ಮಾಡುವ ವಿಚಾರಕ್ಕೆ ಮನಸ್ತಾಪ ಉಂಟಾಗಿ ಬೀಗ ಜಡಿದಿದ್ದರಿಂದ ಭಕ್ತರು ಹಿಡಿಶಾಪ ಹಾಕುತ್ತಿದ್ದಾರೆ.
ಬೀಗ ಜಡಿಯಲು ಕಾರಣ: ಈ ಹಿಂದೆ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಪಂಡಿತ್ ಎಂಬುವರು ಮೃತಪಟ್ಟ ನಂತರ ಅವರ ಹಿರಿಯ ಮಗ ಕೃಷ್ಣಸ್ವಾಮಿ ತಂದೆಯ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದರು. ಆದರೆ ಅವರು ಕೂಡ ಮೃತಪಟ್ಟಿದ್ದರಿಂದ ಅವರ ತಮ್ಮ ವೇಣುಗೋಪಾಲ ಪಂಡಿತ್ ಪೂಜಾ ಕಾರ್ಯವನ್ನು ನೆರವೇರಿಸಿಕೊಂಡು ಹೋಗಿದ್ದರು ಅಲ್ಲದೆ, ಅಣ್ಣನ ಕೆಲಸವನ್ನು ಮುಂದುವರೆಸಿಕೊಂಡು ಹೋಗಿದ್ದರಿಂದ ಅತ್ತಿಗೆ ಸರಸ್ವತಮ್ಮ (ಅಣ್ಣ ಕೃಷ್ಣಸ್ವಾಮಿ ಪತ್ನಿ) ಅವರಿಗೆ ದಿನವೊಂದಕ್ಕೆ ೨೦ ರೂಪಾಯಿ ನೀಡುವ ಒಪ್ಪಂದ ಮಾಡಲಾಗಿತ್ತು ಎನ್ನಲಾಗಿತ್ತು.
ಆದರೆ ಇವರ ತಾಯಿ ನರಸಮ್ಮ ಸಾಯುವ ಮೊದಲು ವಿಲ್ ಬರೆದಿದ್ದು ಅದರಲ್ಲಿ ಹಿರಿಯ ಮಗ ಕೃಷ್ಣಸ್ವಾಮಿಯ ಕುಟುಂಬವೇ ವಂಶಪಾರಂಪರ್ಯವಾಗಿ ಬಂದಿರುವ ಪೂಜಾ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವಂತೆ ಸೂಚಿಸಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಮೃತ ಕೃಷ್ಣಸ್ವಾಮಿ ಅವರ ಪತ್ನಿ ಸರಸ್ವತಮ್ಮ ಅವರು ದೇವಾಲಯ ತಮ್ಮ ಒಡೆತನಕ್ಕೆ ಬರುತ್ತದೆ ಎಂದು ನಗರಪಾಲಿಕೆಯಿಂದ ಖಾತೆಯನ್ನು ಕೂಡ ಮಾಡಿಸಿಕೊಂಡಿದ್ದಾರೆ.
ಅಲ್ಲದೆ ಮೈದುನ ವೇಣುಗೋಪಾಲ್‌ಗೆ ದೇವಾಲಯದ ಪೂಜಾ ಕಾರ್ಯವನ್ನು ತನ್ನ ಅಳಿಯನಿಗೆ ಬಿಟ್ಟುಕೊಡುವಂತೆ ಹೇಳಿದ್ದಾರೆ. ಆದರೆ ಅದಕ್ಕೆ ವೇಣುಗೋಪಾಲ್ ಸೊಪ್ಪು ಹಾಕದಿದ್ದಾಗ ಬಾಗಿಲಿಗೆ ಬೀಗ ಜಡಿದಿದ್ದಲ್ಲದೆ, ಕೆ.ಆರ್.ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದಾರೆ.
ನಗರಪಾಲಿಕೆ ವಿರುದ್ಧ ಆಕ್ರೋಶ: ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ನಗರಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೇವಾಲಯ ಖಾಸಗಿ ವ್ಯಕ್ತಿಗಳಿಗೆ ಸೇರಿಲ್ಲ ಆದ್ದರಿಂದ ಈಗಾಗಲೇ ನೀಡಿರುವ ಖಾತೆಯನ್ನು ಪಾಲಿಕೆ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ಒಟ್ಟಾರೆ ಈ ಪ್ರಕರಣ ತಿರುವು ಪಡೆಯತೊಡಗಿದ್ದು, ಬೀಗ ಜಡಿದಿದ್ದರಿಂದ ಕಳೆದ ನಾಲ್ಕೈದು ದಿನಗಳಿಂದ ದೇವಾಲಯದಲ್ಲಿ ಯಾವುದೇ ಪೂಜಾಕಾರ್ಯ ನಡೆದಿಲ್ಲ. ಈ ಪ್ರಕರಣ ಇತ್ಯರ್ಥವಾಗುವವರೆಗೆ ಆಂಜನೇಯ ಬಂಧಿಯಾಗಿರುವುದಂತು ನಿಜ. ಎಂತಹ ಕಾಲ ಬಂತು ನೋಡಿ!












Click it and Unblock the Notifications