ರಾಷ್ಟ್ರೋತ್ಥಾನ ಪರಿಷತ್ ನಿವೇಶನದ ಸುತ್ತ ವಿವಾದದ ಹುತ್ತ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಗರಿಕ ಸೌಲಭ್ಯ ನಿವೇಶನ (ಸಿ.ಎ) ಹಂಚಿಕೆಗೆ ಸರ್ಕಾರ ರೂಪಿಸಿರುವ ನಿಯಮಗಳನ್ನು ಸ್ವತಃ ಯಡಿಯೂರಪ್ಪ ಅವರೇ ಗಾಳಿಗೆ ತೂರಿ ಸಂಘ ಪರಿವಾರದ ಸಂಘಟನೆಗೆ ಸಿ.ಎ ನಿವೇಶನವನ್ನು ನೇರವಾಗಿ 30 ವರ್ಷಗಳ ಕಾಲ ಗುತ್ತಿಗೆಗೆ 'ಕೊಡುಗೆ' ನೀಡಿದ್ದಾರೆ.
ರಾಜಧಾನಿಯ ಪ್ರತಿಷ್ಠಿತ ಬಡಾವಣೆ ಸದಾಶಿವನಗರದ (ಪ್ಯಾಲೇಸ್ ಅರ್ಚರ್ಡ್ಸ್) ಲ್ಲಿರುವ ಅಂದಾಜು 30 ಕೋಟಿ ರೂ. ಬೆಲೆ ಬಾಳುವ 9062 ಚದರಡಿಯ ನಾಗರಿಕ ಸೌಲಭ್ಯ ನಿವೇಶನ ಸಂಖ್ಯೆ- 09 ಈಗ ರಾಷ್ಟ್ರೋತ್ಥಾನ ಪರಿಷತ್ ಪಾಲಾಗಿದೆ. ಸಿ.ಎ. ನಿವೇಶನ ಹಂಚಿಕೆಗೆ ಪತ್ರಿಕೆಗಳ ಮೂಲಕ ಯಾವುದೇ ಜಾಹಿರಾತು ನೀಡಿ ಅರ್ಜಿ ಆಹ್ವಾನಿಸಿಲ್ಲ ಎಂಬುದನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿದ ಮಾಹಿತಿಗೆ ಬಿಡಿಎ ನೀಡಿರುವ ಉತ್ತರವೇ ದೃಢಪಡಿಸುತ್ತದೆ. ಜತೆಗೆ ಸಿ.ಎ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ಕಾಯುತ್ತಿದ್ದ ಸಂಘ ಸಂಸ್ಥೆಗಳ ಹಿರಿತನವನ್ನೂ ಕಡೆಗಣಿಸಲಾಗಿದೆ.
ಸದಾಶಿವನಗರ ಬಡಾವಣೆಯ ಸಿ.ಎ.ನಿವೇಶನ ಸಂಖ್ಯೆ-09 ಅನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಯೋಗ, ಚಿಕಿತ್ಸೆ, ಜಿಮ್ ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟ ಉದ್ದೇಶಗಳಿಗಾಗಿ ಚಾಲ್ತಿಯಲ್ಲಿರುವ ಸಿ.ಎ. ನಿವೇಶನ ಹಂಚಿಕೆ ದರವನ್ನು ವಿಧಿಸಿ ಹಂಚಿಕೆ ಮಾಡಲಾಗಿದೆ ಎಂದು ಆದೇಶದಲ್ಲಿ ತೋರಿಸಲಾಗಿದೆ. ಆದರೆ, ಇದೇ ಜಾಗದಲ್ಲಿ ಯೋಗಾಸನ ತರಗತಿಗಳನ್ನು ನಡೆಸುತ್ತಿದ್ದ ಕುಟುಂಬವನ್ನು ಎತ್ತಂಗಡಿ ಮಾಡಿರುವುದೇ ಈ ಪ್ರಕರಣದ ವಿಶೇಷತೆ.
ಈ ನಿವೇಶನವನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಹಂಚಿಕೆ ಮಾಡುವ ಸಲುವಾಗಿಯೇ ಆ ಜಾಗದಲ್ಲಿ ಕಳೆದ 40 ವರ್ಷಗಳಿಂದ ಅಣ್ಣಾಮಲೈ ಎಂಬುವರು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದ ಆರೋಗ್ಯ ಯೋಗಾಸನ ಶಾಲೆಗೆ ನೀಡಿದ್ದ ಗುತ್ತಿಗೆ ಅವಧಿ ಇನ್ನೂ 2029ರ ಆಗಸ್ಟ್ 6ರ ವರೆಗೆ ಇದ್ದರೂ ಯಾವುದೇ ರೀತಿಯ ನೋಟಿಸೂ ನೀಡದೇ, ದಿಢೀರನೇ ರದ್ದುಪಡಿಸಿ ಆ ನಿವೇಶನವನ್ನು 2010ರ ಜೂನ್ 11 ರಂದು ರಾಷ್ಟ್ರೋತ್ಥಾನ ಪರಿಷತ್‌ಗೆ ಹಂಚಿಕೆ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಗುತ್ತಿಗೆ ಒಪ್ಪಂದದಲ್ಲಿ ವಿಧಿಸಿದ್ದ ಕೆಲವು ಷರತ್ತುಗಳನ್ನು ಯೋಗಾ ಪಾಠ ಹೇಳಿಕೊಡುತ್ತಿದ್ದ ಅಣ್ಣಾಮಲೈ ಅವರು ಉಲ್ಲಂಘಿಸಿದ್ದಾರೆ ಎಂಬ ನೆಪವೊಡ್ಡಿ 1970ರ ಅಕ್ಟೋಬರ್ 22 ರಂದು ಬಿಡಿಎ ಮತ್ತು ಅಣ್ಣಾಮಲೈ ನಡುವೆ ಆಗಿರುವ ಗುತ್ತಿಗೆ ಅವಧಿಯ ಮೂಲ ಒಪ್ಪಂದ ಹಾಗೂ ಆ ನಂತರ 1999ರ ಸೆಪ್ಟೆಂಬರ್ 27 ರಂದು ಗುತ್ತಿಗೆ ಅವಧಿ ನವೀಕರಣ ಎರಡೂ ಒಪ್ಪಂದಗಳನ್ನು 2002 ರಲ್ಲಿಯೇ ಬಿಡಿಎ ರದ್ದುಪಡಿಸಿದೆ. ಜತೆಗೆ ಯೋಗಾಸನ ತರಗತಿಗಳನ್ನು ನಡೆಸಲು ನಿರ್ಮಿಸಿದ್ದ ಕಟ್ಟಡವನ್ನು ಬಿಡಿಎ ನೆಲಸಮ ಮಾಡಿ ಖಾಲಿ, ಸಿ.ಎ ನಿವೇಶನ ಎಂದು ತೋರಿಸಿ ಹಂಚಿಕೆ ಮಾಡಲಾಗಿದೆ.
ಆದರೆ, 2002-03 ರಿಂದ 2010ರವರೆಗೂ ಅಣ್ಣಾಮಲೈ ಕುಟುಂಬ ಆ ಸಿ.ಎ ನಿವೇಶನದಲ್ಲಿ ನಿರ್ಮಿಸಿದ್ದ ಕಟ್ಟಡಕ್ಕೆ ಕಾನೂನು ಪ್ರಕಾರ ಪಾವತಿಸಬೇಕಾದ ಆಸ್ತಿ ತೆರಿಗೆಯನ್ನು ಬಿಬಿಎಂಪಿಗೆ, ನೀರು ಹಾಗೂ ವಿದ್ಯುತ್ ಬಳಕೆಯ ಬಿಲ್‌ಗಳನ್ನು ಕ್ರಮವಾಗಿ ಜಲಮಂಡಲಿ ಹಾಗೂ ಬೆಸ್ಕಾಂಗೆ ಪಾವತಿಸಿದೆ. 8 ವರ್ಷಗಳ ಹಿಂದೆಯೇ ಗುತ್ತಿಗೆ ಅವಧಿಯನ್ನು ಬಿಡಿಎ ರದ್ದುಪಡಿಸಿದ್ದರೆ ಆ ಜಾಗವನ್ನು ತನ್ನ ವಶಕ್ಕೆ ಬಿಡಿಎ ಏಕೆ ತೆಗೆದುಕೊಳ್ಳಲಿಲ್ಲ. ಗುತ್ತಿಗೆ ಅವಧಿ ರದ್ದುಪಡಿಸಿದ ನಂತರವೂ ಯೋಗ ಪಾಠ ಹೇಳಿಕೊಡುತ್ತಿದ್ದ ಆ ಕುಟುಂಬವನ್ನು 8 ವರ್ಷಗಳ ಕಾಲ ಅನಧಿಕೃತವಾಗಿ ಏಕೆ ಬಿಡಿಎ ಅಲ್ಲಿಯೇ ಬಿಟ್ಟಿತ್ತು ಎಂಬ ಪ್ರಶ್ನೆಗಳಿಗೆ ಈಗ ಬಿಡಿಎ ಬಳಿ ಉತ್ತರ ಇಲ್ಲ.
ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು, ಎಸ್.ಎಂ.ಕೃಷ್ಣ, ಕೆ.ಎಚ್.ರಂಗನಾಥ್, ಸರೋಜಿನಿ ಮಹಿಷಿ, ನಾಗರತ್ನಮ್ಮ, ಎಚ್.ಎನ್.ನಂಜೇಗೌಡ ಸೇರಿದಂತೆ ಅನೇಕ ಗಣ್ಯರು ಇಲ್ಲಿ ಯೋಗಾಸನ ಕಲಿತವರ ಪಟ್ಟಿಯಲ್ಲಿದ್ದಾರೆ. 2005 ರಲ್ಲಿ ಅಣ್ಣಾಮಲೈ ಅವರ ನಿಧನದ ನಂತರ ಅವರ ಪತ್ನಿ ಹಂಸಲಕ್ಷ್ಮಿಯೇ ಈ ಯೋಗಾಸನ ಶಾಲೆಯನ್ನು ಮುಂದುವರಿಸಿಕೊಂಡು ಸುತ್ತಲಿನ ನಾಗರಿಕರಿಗೆ ಯೋಗಾಸನ ತರಗತಿಗಳನ್ನು ನಡೆಸುತ್ತಿದ್ದರು. ಆದರೆ, ಈಗ ಸರ್ಕಾರ ಹಾಗೂ ಬಿಡಿಎ ಕ್ರಮದಿಂದಾಗಿ ಯೋಗಾಸನ ಶಾಲೆ ನೆಲಸಮಗೊಂಡು ಆ ಜಾಗದಲ್ಲಿ ಬೃಹತ್ ಕಟ್ಟಡ ನಿರ್ಮಿಸಲು ರಾಷ್ಟ್ರೋತ್ಥಾನ ಪರಿಷತ್ ಪೂರ್ವ ತಯಾರಿ ನಡೆಸಿದೆ.
ಆದರೆ, ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಕಟ್ಟಡ ತಲೆಯೆತ್ತಲು ಅವಕಾಶ ಕೊಡುವುದಿಲ್ಲ ಎಂದು ಹೇಳಿರುವ ಸದಾಶಿವನಗರ ರೆಸಿಡೆಂಟ್ ವೆಲ್‌ಫೇರ್ಅಸೋಸಿಯೇಷನ್ 1970ಕ್ಕೂ ಮುನ್ನ ಈ ಜಾಗವನ್ನು ಪಾರ್ಕ್ ಎಂದು ನಮೂದಿಸಲಾಗಿತ್ತು. ಈಗ ಅದೇ ರೀತಿ ಅದನ್ನು ಕಾಯ್ದುಕೊಳ್ಳಬೇಕೆಂದು ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆಸಿದೆ.












Click it and Unblock the Notifications