ಹೋಗುವುದೋ ಬಿಡುವುದೋ : ಧರ್ಮಸಂಕಟದಲ್ಲಿ ಯಡಿಯೂರಪ್ಪ

ಆಣೆ ಮಾಡುವುದಾಗಿ ಘೋಷಿಸಿಯಾಗಿದೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸವಾಲನ್ನು ಸ್ವೀಕರಿಸಿಯೂ ಆಗಿದೆ. ಶೋಭಾ ಮತ್ತು ಈಶ್ವರಪ್ಪ ಮಂಜುನಾಥನಿಗೆ ಪೂರ್ವಭಾವಿಯಾಗಿ ಕಾಣಿಕೆ ಸಲ್ಲಿಸಿಬಂದೂ ಆಯಿತು. ವೇದಿಕೆ ಕಲ್ಪಿಸುವುದಾಗಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಿಳಿಸಿಯೂ ಆಯಿತು.
ರಾಜಕೀಯ ವಲಯದಲ್ಲಿ ಹಿಂದೆಂದೂ ನಡೆಯದಂಥ ವಿದ್ಯಮಾನಕ್ಕೆ ವೇದಿಕೆ ಸಜ್ಜಾಗುತ್ತಿದೆ ಎನ್ನುವಾಗ ಕೆಲ ಮಠಗಳ ಸ್ವಾಮೀಜಿಗಳಿಂದ 'ತಡ್ಕೊಳ್ಳಿ ಯಡಿಯೂರಪ್ಪನವರೆ, ದುಡುಕಬೇಡಿ' ಎಂಬ ಸಂದೇಶ ಬಹಿರಂಗವಾಗಿಯೇ ರವಾನೆಯಾಗಿರುವುದು ಯಡಿಯೂರಪ್ಪನವರನ್ನು ಸಂದಿಗ್ಧತೆಗೆ ಸಿಲುಕಿಸಿದೆ.
"ನೀವ್ ನೀವೇ ಮಾತಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಿ, ಮಂಜುನಾಥನ ಸನ್ನಿಧಿಯೇಕೆ" ಎಂದು ಪೇಜಾವರ ಶ್ರೀಗಳು ಫರ್ಮಾನು ಹೊರಡಿಸಿದ್ದರೆ, ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ "ಇಬ್ಬರೂ ಹಿಂದೆ ಸರಿಯುವುದೇ ಸರಿಯಾದ ಮಾರ್ಗ" ಎಂದು ಸಂಧಾನದ ದಾರಿಯನ್ನು ತೋರಿದ್ದಾರೆ.
ಸುತ್ತೂರು ಶ್ರೀಗಳ ಮಾತಿಗೆ ಮನ್ನಣೆ ಕೊಟ್ಟು ಯಡಿಯೂರಪ್ಪ ಹಿಂದೆ ಸರಿಯುತ್ತಾರೆ ಎಂಬ ಸುದ್ದಿಯೂ ದಟ್ಟವಾಗಿ ಹಬ್ಬಿತ್ತು. ಗಾಳಿಮಾತಿಗೆ ಕಿವಿಗೊಡಬೇಡಿ ಯಡಿಯೂರಪ್ಪ ಹೋಗಿಯೇ ಹೋಗುತ್ತಾರೆ ಎಂದು ಧನಂಜಯ ಕುಮಾರ್ ಹೇಳಿ ಗೊಂದಲಕ್ಕೆ ತಮ್ಮದೊಂದು ಮಾತು ಸೇರಿಸಿದ್ದಾರೆ. ಅವರು ಹೋಗಲಿ ಬಿಡಲಿ ನಾನಂತೂ ಹೋಗುತ್ತೇನೆ ಎಂದು ಎಚ್ಡಿಕೆ ಮುಂದಿಟ್ಟ ಹೆಜ್ಜೆ ಹಿಂದಿಡಲು ಒಪ್ಪುತ್ತಿಲ್ಲ.
ಎಲ್ಲಕ್ಕಿಂತ ಮುಖ್ಯ ಸಂಗತಿಯೆಂದರೆ, ಪ್ರತಿ ನಿರ್ಣಯ ತೆಗೆದುಕೊಳ್ಳುವ ಮುನ್ನ ಕಂಡಕಂಡ ದೇವರಿಗೆ ಅಡ್ಡಬೀಳುವ ಯಡಿಯೂರಪ್ಪ, ಮುಂದಿಟ್ಟ ಹೆಜ್ಜೆಯನ್ನು ಹಿಂದಿಟ್ಟು ತಮ್ಮ ಮಾತನ್ನು ತಾವೇ ನುಂಗುತ್ತಾರಾ ಎಂಬುದು. ಸಾಲದ್ದಕ್ಕೆ, ಆಣೆ ಮಾಡುತ್ತೇನೆಂದು ಹೇಳಿ ಹಿಂತೆಗೆದರೆ ಹಾಗಾಗುತ್ತದೆ ಹೀಗಾಗುತ್ತದೆ ಎಂದು ಭಯ ಕೆಲವರು ಬಿತ್ತುತ್ತಿದ್ದಾರೆ. ದೇವರ ಮೇಲೆ ಅಪಾರ ಭಕ್ತಿ ಇಟ್ಟುಕೊಂಡಿರುವ ಯಡಿಯೂರಪ್ಪ ಏನು ಮಾಡಲಿದ್ದಾರೆ?












Click it and Unblock the Notifications