ಹಿಮಾಲಯಕ್ಕೆ ಹೊರಟುನಿಂತ ಧರ್ಮಸ್ಥಳದ ಮಂಜುನಾಥ

ನೋವಿನಲ್ಲಾಗಲೀ, ಉಕ್ಕುವ ಸಂಭ್ರಮದಲ್ಲಿಯಾಗಲಿ ನನ್ನ ಭಕ್ತರುಗಳ ದೂರುಗಳೇ ಹೊರಡದೆ ತಮ್ಮ ಕಣ್ಣುಗಳಲ್ಲೇ ಎಲ್ಲ ಭಾವಗಳನ್ನೂ ಬಿಂಬಿಸುವುದನ್ನು ನೋಡಿ ನಾನು ರೋಮಾಂಚಿತನಾಗಿದ್ದೇನೆ. ಪರಿಹಾರಗಳು, ಸಾಂತ್ವನಗಳು, ಶುಭ ಹಾರೈಕೆಗಳೂ ನನ್ನ ಭಕ್ತರಿಗೆ ಸಲ್ಲಿಸುವುದಕ್ಕಾಗಿಯೇ ನಾನು ಧರ್ಮಸ್ಥಳದಲ್ಲಿ ನನ್ನ ವಾಸಸ್ಥಾನ ಮಾಡಿಕೊಂಡಿರುವುದು.
ಆದರೆ ಈಗ ನನಗೆ ಮನಸ್ಸು ಕಸಿವಿಸಿಗೊಳ್ಳುವ ಸಂದರ್ಭ ಸೃಷ್ಟಿಯಾಗಿದೆ. ಕರ್ನಾಟಕದ ಮಾಜಿ, ಹಾಲಿ ಮುಖ್ಯಮಂತ್ರಿಗಳು ನನ್ನ ಸಮ್ಮುಖದಲ್ಲಿ ಆಣೆ ಪ್ರಮಾಣಗಳನ್ನು ಮಾಡಿ ನನ್ನನ್ನು ಸಾಕ್ಷಿಯನ್ನಾಗಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ತಮ್ಮ ವೈಯಕ್ತಿಕ ಪ್ರತಿಷ್ಠೆಗಳು, ಪರಸ್ಪರ ದ್ವೇಷಾಸೂಯೆಗಳು, ಅಧಿಕಾರ ಲಾಲಸೆ, ಇವುಗಳಲ್ಲಿ ಮುಳುಗಿರುವ ಈ ನಾಯಕರುಗಳಿಗೆ ಮನಸ್ಸಾಕ್ಷಿಗಳೆಂಬುದು ಸರ್ವಥಾ ಶೂನ್ಯವಾಗಿದ್ದು, ನನ್ನ ಹೆಸರನ್ನು ಮತ್ತು ಈ ಸ್ಥಳವನ್ನು ದುರ್ಬಳಕೆ ಮಾಡಿಕೊಳ್ಳಹೊರಟಿದ್ದಾರೆ. ಇವರುಗಳ ಹಾದಿಬೀದಿ ವ್ಯಾಜ್ಯಗಳನ್ನು ನನ್ನ ಆಲಯಕ್ಕೂ ತಂದು ನನ್ನನ್ನು ಬೀದಿಗೆ ಎಳೆಯುವ ಹುನ್ನಾರ ನಡೆಸಿದ್ದಾರೆ.
ಇದು ನನಗಾಗಲಿ, ನನ್ನ ಭಕ್ತರಿಗಾಗಲಿ ತಿಳಿಯಲಾರದು ಎಂಬ ಅಹಂಕಾರದಲ್ಲಿ ಬೀಗುತ್ತಿದ್ದಾರೆ. ನನ್ನ ಬಳಿ ಬರುವುದರ ಬದಲು ತಮ್ಮಗಳನ್ನು ಚುನಾಯಿಸಿದ ಜನಗಳನ್ನು ಲಕ್ಷಾಂತರ ಸೇರಿಸಿ ಅರಮನೆಯ ಮೈದಾನದಲ್ಲಿಯೋ ಅಥವಾ ವಿಧಾನಸೌಧದ ಎದುರೋ ತಮ್ಮ ಪ್ರಮಾಣಗಳನ್ನು ಮಾಡಬಹುದು ಎಂದು ನನ್ನ ಸಲಹೆ. ಆದ್ದರಿಂದ, ನನ್ನ ನಿಜವಾದ ಮುಗ್ಧ, ಶುದ್ಧ, ಪ್ರಾಮಾಣಿಕ ಭಕ್ತರುಗಳಿಗೆ ತುಂಬ ತೊಂದರೆಯಾಗುತ್ತದೆಂದು ಗೊತ್ತಿದ್ದರೂ, ಒಂದು ನಿರ್ಧಾರಕ್ಕೆ ಬಂದಿದ್ದೇನೆ. 26ನೇ ತಾರೀಖಿನಿಂದ 28 ರವರೆವಿಗೆ ನಾನು ಧರ್ಮಸ್ಥಳವನ್ನು ಬಿಟ್ಟು ಮೂರು ನಾಲ್ಕು ದಿವಸ ಹಿಮಾಲಯದಲ್ಲಿದ್ದು ಬಿಡುತ್ತೇನೆ.
ನನ್ನ ಭಕ್ತರುಗಳು ಇದನ್ನು ಗಮನಿಸಿ, ಆ ಮೂರು ನಾಲ್ಕು ದಿನ ಧರ್ಮಸ್ಥಳಕ್ಕೆ ಬರುವ ಕಾರ್ಯಕ್ರಮವಿದ್ದರೆ ರದ್ದುಗೊಳಿಸಬೇಕೆಂದು ವಿನಂತಿಸುತ್ತೇನೆ. ಹಾಗೆಂದು ಈಗಾಗಲೇ ಹೊರಟುಬಿಟ್ಟಿರುವವರು 'ಹೇಗಿದ್ದರೂ ಉಡುಪಿ ಹತ್ತಿರದಲ್ಲಿಯೇ ಇದೆ, ಅಲ್ಲಿ ಕೃಷ್ಣದರ್ಶನ ಮಾಡಿ ಹೋಗೋಣ' ಎಂದು ಅತ್ತ ಪಯಣಿಸಬೇಡಿ.
ಉಡುಪಿಯಲ್ಲಿ ಕೃಷ್ಣನೂ ಆ ಸಮಯದಲ್ಲಿ ಇರುವುದು ಖಚಿತವಿಲ್ಲ. ಅವನು ಅಕಸ್ಮಾತ್ ಇದ್ದು, ಈ ಮಾಜಿ, ಹಾಲಿಗಳು ಅಲ್ಲಿಗೂ ಹೋದರೆ, ಅವರಿಗೆ ಭಗವದ್ಗೀತೆ ಬೋಧಿಸಿ ಪಾವನವನ್ನಾಗಿ ಮಾಡಲು ಇವರುಗಳೇನು ಅರ್ಜುನರಲ್ಲವಲ್ಲ. ಉತ್ತರ ಕುಮಾರರಿಂದ ತಪ್ಪಿಸಿಕೊಳ್ಳಲೇ ಕೃಷ್ಣ ದ್ವಾರಕೆಗೆ ಹೊರಡುವ ಸೂಚನೆಯಿದೆ. ಹೀಗೆ ನನ್ನ ಕೈಮೀರಿದ ಸಂದರ್ಭಗಳಿಂದಾಗಿ ನನ್ನ ಭಕ್ತರಿಗೆ ಆಗುತ್ತಿರುವ ಅನನುಕೂಲಕ್ಕೆ ನನಗೆ ಬೇಸರವಿದೆ.
-ಇತಿ ನಿಮ್ಮ ಭಕ್ತಿಯ, ಧರ್ಮಸ್ಥಳದ ಮಂಜುನಾಥ.
(ಜಿ.ಕೆ. ಗೋವಿಂದರಾವ್, ಬೆಂಗಳೂರು)












Click it and Unblock the Notifications