ಬೆಂಗಳೂರಿನಲ್ಲಿ ಅಂಕೆ ತಪ್ಪಿರುವ ಪ್ಲಾಸ್ಟಿಕ್ ಚೀಲ ಬಳಕೆ

ಅಂಗಡಿಯವರು, ಬೀದಿಬದಿ ವ್ಯಾಪಾರಿಗಳು ಕೂಡ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದರೂ, ಒಂದು ರುಪಾಯಿ ಕೊಟ್ಟರೆ ಮೆತ್ತಗೆ ಟೇಬಲ್ ಕೆಳಗಿನಿಂದ, ಬುಟ್ಟಿ ಕೆಳಗಡೆಯಿಂದ ಪ್ಲಾಸ್ಟಿಕ್ ಚೀಲ ತೆಗೆದು ಗ್ರಾಹಕರಿಗೆ ಕೊಡುತ್ತಿದ್ದಾರೆ. ಇದು ನಗರದ ಎಲ್ಲ ಪ್ರದೇಶಗಳಲ್ಲಿಯೂ ಕಂಡುಬರುತ್ತಿರುವ ದೃಶ್ಯ.
ಸಾರ್ವಜನಿಕರು ಕೂಡ, 'ಅಯ್ಯೋ ಚೀಲ ತಂದಿಲ್ಲ, ನೀನೇ ಒಂದು ಪ್ಲಾಸ್ಟಿಕ್ ಕೊಡು ಪರವಾಗಿಲ್ಲ. ಮುಂದಿನ ಬಾರಿ ಮನೆಯಿಂದ ಚೀಲ ತರುತ್ತೇನೆ' ಎಂದು ಅಂಗಡಿಯವರನ್ನೇ ಬಲವಂತ ಮಾಡುತ್ತಾರೆ. ವ್ಯಾಪಾರಿಗಳು ನಮ್ಮ ಗಂಟೇನು ಹೋಗುತ್ತೆ ಎಂದು ಒಂದು ರುಪಾಯಿ ಕಿತ್ತುಕೊಂಡು ಪ್ಲಾಸ್ಟಿಕ್ ಚೀಲ ನೀಡಿರುತ್ತಾನೆ.
ಇಂಥ ಚೀಲಗಳು ಪರಿಸರಕ್ಕೆ ಮಾರಕ ಎಂದು ಘಂಟಾಘೋಷವಾಗಿ ಸರಕಾರ ಸಾರುತ್ತಿದ್ದರೂ ಕೇಳಲು ಕಿವಿಗಳಿಲ್ಲ. ನಾವೇ ಸ್ವತಃ ಬದಲಾಗದಿದ್ದರೆ ಸಮಾಜ ಬದಲಾಗುವುದು ಹೇಗೆ? ಅಗತ್ಯಗಳಿಗೆ ತಕ್ಕಂತೆ ತಮ್ಮನ್ನು ತಾವು ಬದಲಾಯಿಸಿಕೊಳ್ಳಲು ನಮ್ಮ ಜನರಿಗೆ ಏನೋ ಹಿಂಜರಿಕೆ, ಆಲಸಿತನ. ಹೀಗಾಗಿ, ಅಕ್ರಮವಾಗಿ ಪ್ಲಾಸ್ಟಿಕ್ ಚೀಲ ತಯಾರಿಸುವಂಥ ಉದ್ಯಮಗಳು ತಲೆಯೆತ್ತಿ ನಿಂತಿವೆ.
1.5 ಟನ್ ಪ್ಲಾಸ್ಟಿಕ್ ಚೀಲ ವಶ : ನಗರದ ಕಾಮಾಕ್ಷಿಪಾಳ್ಯ ಪ್ರದೇಶದಲ್ಲಿ ಅನಧಿಕೃತವಾಗಿ 40 ಮೈಕ್ರಾನ್ ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಚೀಲಗಳನ್ನು ತಯಾರು ಮಾಡುತ್ತಿದ್ದ ಮೂರು ಉದ್ಯಮಗಳ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೋಮವಾರ ದಾಳಿ ಮಾಡಿದ್ದು, 1.5 ಟನ್ ನಷ್ಟು ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ 40 ಮೈಕ್ರಾನ್ ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಚೀಲ ಬಳಸುವುದನ್ನು ನಿಷೇಧಿಸಲಾಗಿದ್ದರೂ, ಸರಕಾರದ ಕಣ್ಣಿಗೆ ಮಣ್ಣೆರಚಿ ಅವ್ಯಾಹತವಾಗಿ ಇವುಗಳನ್ನು ಬಳಸಲಾಗುತ್ತಿದೆ. ಭಾರತ ಸರಕಾರ ಕೂಡ ಫೆಬ್ರವರಿ 2ರಂದು ಇಂಥ ಚೀಲಗಳನ್ನು ಬಳಸದಂತೆ ಅಧಿಸೂಚನೆ ಹೊರಡಿಸಿದೆ.
ಮೆ. ಸಾಯಿರಾಮ್ ಇಂಡಸ್ಟ್ರೀಸ್, ಮೆ. ಮಾರುತಿ ಇಂಡಸ್ಟ್ರೀಸ್ ಮತ್ತು ಮೆ. ಶ್ರೀರಾಮ ಇಂಡಸ್ಟ್ರೀಸ್ ಅನಧಿಕೃತವಾಗಿ 40 ಮೈಕ್ರಾನ್ ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಚೀಲಗಳನ್ನು ಮಂಡಳಿಯ ಅನುಮತಿ ಕೂಡ ಪಡೆಯದೆ ತಯಾರಿಕೆಯಲ್ಲಿ ತೊಡಗಿದ್ದವು. ಈ ಕೈಗಾರಿಕೆಯಲ್ಲಿ ತೊಡಗುವವರು ಮಂಡಳಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.












Click it and Unblock the Notifications