ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಸ್: ರೈತರಿಗೆ ಸೋಲು, ದೇವೇಗೌಡರಿಗೆ ಹಿನ್ನಡೆ

By Srinath
|
Google Oneindia Kannada News

Deve Gowda
ಬೆಂಗಳೂರು, ಜೂನ್ 16: ನೈಸ್‌ ಯೋಜನೆಗಾಗಿ ಭೂ ಸ್ವಾಧೀನ ವಿರೋಧಿಸಿ ಹಲವು ರೈತರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಮಂಜುಳಾ ಚಲ್ಲೂರ್ ಮತ್ತು ನ್ಯಾ. ಎಚ್‌. ಬಿಳ್ಳಪ್ಪ ಅವರ ಹೈಕೋರ್ಟ್‌ ವಿಭಾಗೀಯ ಪೀಠ ಬುಧವಾರ ವಜಾಗೊಳಿಸಿ, ನೈಸ್‌ ಹಾದಿಯನ್ನು ಸುಗಮಗೊಳಿಸಿದೆ. ಇದರಿಂದ ಸಂತ್ರಸ್ತ ರೈತರಿಗೆ ತೀವ್ರ ಹಿನ್ನಡೆಯಾಗಿದೆ.

ತೀರ್ಪಿನ ಬಗ್ಗೆ ಸುವರ್ಣ ನ್ಯೂಸ್ ಚಾನೆಲ್ ಗೆ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ದೇವೇಗೌಡರು ನ್ಯಾಯಾಲಯದ ತೀರ್ಪಿನ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ನೈಸ್ ಪ್ರಕರಣದಲ್ಲಿ ಕೋರ್ಟ್ ತೀರ್ಪು ನೋಡಿದರೆ ನ್ಯಾಯಾಂಗವೂ ಶಾಸಕಾಂಗದ ಪ್ರಲೋಭೆಗೊಳಗಾಗಿರುವ ಗುಮಾನಿ ಬರುತ್ತದೆ. ಯೋಜನೆಗೆ ಹೆಚ್ಚುವರಿಯಾಗಿ ಭೂಮಿ ನೀಡಿರುವುದಾಗಿ ರಾಜ್ಯ ಸರಕಾರವೇ ಈ ಹಿಂದೆ ಕೋರ್ಟ್ ನಲ್ಲಿ ಒಪ್ಪಿಕೊಂಡಿತ್ತು. ಈಗ ನೋಡಿದರೆ ವ್ಯತಿರಿಕ್ತ ತೀರ್ಪು ಬಂದಿದೆ ಎಂದು ಖೇದ ವ್ಯಕ್ತಪಡಿಸಿದರು.

ನೈಸ್‌ ಸಂಸ್ಥೆಯು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಈಗ ಜಯಗಳಿಸಿರಬಹುದು. ಆದರೆ ನೈಸ್‌ ಭೂ ಸ್ವಾಧೀನದ ವಿರುದ್ದದ ಹೋರಾಟ ಇಷ್ಟಕ್ಕೆ ನಿಲ್ಲದು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮುಂದುವರಿಸುವುದಾಗಿ ಅವರು ಘೋಷಿಸಿದರು.

ಎಲೆಕ್ಟ್ರಾನಿಕ್‌ ಸಿಟಿ ವ್ಯಾಪ್ತಿಯ ಬಾಗಲೂರು, ಕೋನಪ್ಪನ ಅಗ್ರಹಾರ, ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ, ಪಿಳ್ಳಗಾನಹಳ್ಳಿ, ಉತ್ತರಹಳ್ಳಿ, ಬಸವನಪುರ, ಕೊಡಿಗೇಹಳ್ಳಿ, ಹೊಸಕೆರೆಹಳ್ಳಿ ಸೇರಿದಂತೆ ಹಲವು ಗ್ರಾಮಗಳು 75 ರೈತರು ಸುಮಾರು 700 ಎಕರೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಈ ಎಲ್ಲಾ ಅರ್ಜಿಗಳ ಕುರಿತು ವಿಭಾಗೀಯ ಪೀಠ ಪ್ರತ್ಯೇಕ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿತು.

ರಿಟ್‌ ಅರ್ಜಿಗಳು ವಜಾ ಆಗಿದ್ದರೂ, ಆರು ವಾರ ಕಾಲ ನೈಸ್‌ ಯೋಜನೆ ಕಾಮಗಾರಿಯಲ್ಲಿ ಯಥಾಸ್ಥಿತಿ ಕಾಯ್ದು ಕೊಳ್ಳಬೇಕಿದೆ. 2006ರಲ್ಲಿ ಸುಪ್ರೀಂಕೋರ್ಟ್‌ ನೈಸ್‌ ಯೋಜನೆಗೆ ಹಸಿರು ನಿಶಾನೆ ತೋರಿತ್ತು.

ಶುಕ್ರವಾರದಿಂದ ಜಾಗೃತಿ ಅಭಿಯಾನ: ಈ ಮಧ್ಯೆ, ನೈಸ್ ರಸ್ತೆ ಹೆಸರಿನಲ್ಲಿ ರೈತರಿಗಾಗುತ್ತಿರುವ ಅನ್ಯಾಯವನ್ನು ಬಯಲಿಗೆಳೆಯಲು ಜೂನ್ 17ರಿಂದ 19ರವರೆಗೆ ಬೆಂಗಳೂರಿನಲ್ಲಿ ಜನಪರ ಸಂಘಟನೆಗಳ ಒಕ್ಕೂಟವು 'ನ್ಯಾಯಕ್ಕಾಗಿ ನಾವು, ಜೊತೆಗೂಡಿ ನೀವು' ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ ಎಂದು ಪತ್ರಕರ್ತ ಅಗ್ನಿ ಶ್ರೀಧರ್ ಪ್ರಕಟಿಸಿದ್ದಾರೆ.

English summary
In a major relief for NICE, the High court on Wednesday (JUne15) dismissed pleas challenging the acquisition of land for the Bangalore-Mysore Infrastructure Corridor Project (BMICP). Expressing dissatisfaction on the judgement Ex PM Deve Gowda has vowed to fight it in Supreme court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X