ನಂಜನಗೂಡು ಶ್ರೀಕಂಠೇಶ್ವರನಿಗೆ ಮತ್ತೆ ಪ್ರದೋಷ ಪೂಜೆ

ಸಾಂಪ್ರದಾಯಿಕವಾಗಿ ನಡೆಯುತ್ತಾ ಬಂದಿದ್ದ ಈ ಸೇವೆಗಳು ಕಳೆದ ಮೂರು ವರ್ಷಗಳಿಂದ ನಡೆಯುತ್ತಿರಲಿಲ್ಲ. ಕೆಲಸದ ಒತ್ತಡ ಸಬೂಬು ನೀಡಿ ಸೇವೆಗಳಿಗೆ ದೇವಾಲಯದ ಸಿಬ್ಬಂದಿಗಳು ಅವಕಾಶ ನೀಡುತ್ತಿರಲಿಲ್ಲ. ಮುಜರಾಯಿ ವ್ಯಾಪ್ತಿಯಲ್ಲಿ ಬರುವ ಮತ್ತು ಸರಕಾರಕ್ಕೆ ಪ್ರಮುಖ ಆದಾಯದ ದೇವಾಲಯ ಇದಾಗಿದ್ದು ಸಂಜೆಯ ವೇಳೆ ಸಿಬ್ಬಂದಿಗಳು ಕೆಲಸಕ್ಕೇ ಹಾಜರಾಗುತ್ತಿರಲಿಲ್ಲ. ಇನ್ನು, ಈ ದೇವಾಲಯದಲ್ಲಿ ಎಲ್ಲಾ ಉತ್ಸವ, ಪೂಜೆಗಳು ಎಂದಿನಂತೆ ನಡೆಯಲಿದ್ದು ಭಕ್ತಾದಿಗಳು ಭಾಗವಹಿಸುವಂತೆ ದೇವಾಲಯದ ನಿರ್ವಾಹಕ ಅಧಿಕಾರಿ ಎನ್ ರಾಮಮೂರ್ತಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಸಿಬ್ಬಂದಿಗಳ ಉದಾಸೀನತೆ ವರ್ತನೆಯ ಬಗ್ಗೆ ಭಕ್ತಾದಿಗಳು ಬಹಳಷ್ಟು ಬಾರಿ ನಿರಾಶರಾಗಿದ್ದರು. ಈಗ ರಾಮಮೂರ್ತಿ ಅಧಿಕಾರ ವಹಿಸಿಕೊಂಡ ನಂತರ ಎಲ್ಲಾ ಸಿಬ್ಬಂದಿಗಳು ಬೆಳಗ್ಗೆ ಮತ್ತು ಸಂಜೆ ಹಾಜರಿ ಕುರಿತು ಕಟ್ಟು ನಿಟ್ಟಿನ ಸೂಚನೆ ನೀಡಿ, ನಿಂತು ಹೋಗಿದ್ದ ಸೇವಾಕಾರ್ಯಗಳಿಗೆ ಮತ್ತೆ ಚಾಲನೆ ನೀಡಿದ್ದಾರೆ. ಇದರಿಂದ ಶ್ರೀಕಂಠೇಶ್ವರನಿಗೆ ಕ್ರಮಬದ್ದವಾಗಿ ಪೂಜೆಯೂ ನಡೆಯುತ್ತಿದೆ ಮತ್ತು ದೇವಾಲಯದ ಆದಾಯವೂ ದಾಖಲೆಯ ಗಳಿಕೆ ಕಾಣುತ್ತಿದೆ.
ಪ್ರದೋಷ ಪೂಜೆಯ ಹಿನ್ನೆಲೆ : ಹಿಂದೆ ದೇವತೆಗಳು ಮತ್ತು ಅಸುರರು ಅಮೃತಕ್ಕಾಗಿ ಕ್ಷೀರ ಸಾಗರವನ್ನು ಕಡೆಯುತ್ತಿರಬೇಕಾದರೆ ಹಾಲಾಹಲ ವಿಷ ಉಧ್ಭವವಾಗುತ್ತದೆ. ಇದರಿಂದ ರಕ್ಷಿಸಿಕೊಳ್ಳಲು ಅವರು ಶಿವನ ಮೊರೆ ಹೋಗುತ್ತಾರೆ. ಇವರ ಪ್ರಾರ್ಥನೆಗಳಿಗೆ ಸ್ಪಂದಿಸಿದ ಶಿವ ವಿಷವನ್ನು ಸೇವಿಸುತ್ತಾನೆ. ನಂತರ ಶಿವನ ಅಣತಿಯಂತೆ ಅಮೃತಕ್ಕಾಗಿ ಮತ್ತೆ ಕ್ಷೀರ ಸಾಗರವನ್ನು ಕಡೆಯಲು ಆರಂಭಿಸುತ್ತಾರೆ, ದ್ವಾದಶಿಯ ದಿನದಂದು ಅವರಿಗೆ ಅಮೃತ ಲಭ್ಯವಾಗುತ್ತದೆ.
ಆದರೆ ದೇವತೆಗಳು ಈ ದ್ವಾದಶಿಯ ದಿನದಂದು ಅಮೃತ ಸಿಗಲು ಕಾರಣನಾದ ಶಿವನನ್ನು ಸ್ಮರಿಸದೆ ಖುಷಿ ಆಚರಿಸಿ ಕೊಳ್ಳುತ್ತಾರೆ. ಆದರೆ ಮರುದಿನ ಅಂದರೆ ತ್ರಯೋದಶಿಯ ದಿನದಂದು ತಮ್ಮ ತಪ್ಪನ್ನು ಅರಿತು ಶಿವನನ್ನು ಓಲೈಸಲು ಶಿವನ ವಾಹನವಾದ ನಂದಿಯ ಕೊಂಬಿನ ಮಧ್ಯೆ ಪ್ರಾರ್ಥನೆ ಮಾಡುತ್ತಾರೆ. ಶಿವ ಇವರ ಪ್ರಾರ್ಥನೆಗೆ ಓಗೊಟ್ಟು ಅವರ ತಪ್ಪನ್ನು ಮನ್ನಿಸುತ್ತಾನೆ. ಶುಕ್ಲ ಮತ್ತು ಕೃಷ್ಣ ಪಕ್ಷದ ತ್ರಯೋದಶಿಯ ದಿನ ಸಂಜೆ 4.30ರಿಂದ 6ಗಂಟೆಯ ವರೆಗಿನ ಸಮಯವದಲ್ಲಿ ಪ್ರದೋಷ ಪೂಜೆ ನಡೆಸಲಾಗುತ್ತದೆ. ಈ ಕಾಲದಲ್ಲಿ ಶಿವನಿಗೆ ಪಂಚಾಮೃತ ಅಬಿಷೇಕ ಬಹಳ ವಿಶಿಷ್ಟ.












Click it and Unblock the Notifications