ಮಳೆಯ ಮೇಲೂ ಹವಾಮಾನ 'ತಜ್ಞ'ರ ಬೆಟ್ಟಿಂಗ್

ಇನ್ನೂ ಮೂರು ದಿನ ಇದೆಯಲ್ಲ ಎಂದು ಬಿಸಿಯೇರಿದ ನೆಲದ ಮೇಲೆ ತಣ್ಣಗೆ ಕುಳಿತಿದ್ದ ಜನರಿಗೆ ಅಚ್ಚರಿ ಮೂಡಿಸಿದೆ. ಬೆಂಗಳೂರಿನಲ್ಲಿ ಯಾವಾಗ ಬಿಸಿಲು ಸುರಿಯುತ್ತದೋ, ಮಳೆ ಹುಯ್ಯುತ್ತದೋ ಆ ಹವಾಮಾನ ತಜ್ಞರಿಗೂ ಊಹಿಸಲು ಸಾಧ್ಯವಿಲ್ಲ ಎಂಬುದೇನೋ ಸರಿ. ಆದರೆ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಇಂಥದೇ ಸಮಯದಲ್ಲಿ ಮುಂಗಾರು ಪ್ರಾರಂಭವಾಗುತ್ತದೆಂದು ತಜ್ಞರಿಗೆ ನಿಖರವಾಗಿ ಹೇಳುವುದು ಸಾಧ್ಯವಿಲ್ಲವೆ ಎಂದೂ ಅಂದುಕೊಳ್ಳುತ್ತಿರಬಹುದು. ಪ್ರಕೃತಿಯ ವೈಚಿತ್ರ್ಯವನ್ನು ಬಲ್ಲವರಾರು?
ಹವಾಮಾನ ಇಲಾಖೆಗೆ ಅಜೀಬಾತ್ ಸಂಬಂಧಿಸಿರದ 'ತಜ್ಞ'ರ ತಂಡವೊಂದು ಇದೇ ಬಗೆಯ ಲೆಕ್ಕಾಚಾರದಲ್ಲಿ ಕುಳಿತಿದೆಯೆಂದರೆ ನಿಮಗೆ ಅಚ್ಚರಿಯಲ್ಲ, ಆಘಾತವಾಗುವುದು ಖಂಡಿತ. ಕ್ರಿಕೆಟ್ ಮೇಲೆ, ಫುಟ್ಬಾಲ್ ಮೇಲೆ, ಕೊನೆಗೆ ವಿಲಿಯಂ ಮತ್ತು ಕೇಟ್ ಮದುವೆಯ ಮೇಲೆ ಕಟ್ಟಲಾದ ಬೆಟ್ಟಿಂಗ್ ಬಗ್ಗೆ ಓದಿದ್ದೀರಿ. ಆದರೆ, ಮುಳೆಯ ಮೇಲೆ ಬೆಟ್ಟಿಂಗ್ ಕಟ್ಟುವ ದಂಧೆಯೇ ತಲೆಯೆತ್ತಿದೆ ಎಂಬ ಬಗ್ಗೆ ಕೇಳಿದ್ದೀರಾ?
ಮಳೆ ಇಂಥದೇ ಸಮಯದಲ್ಲಿ ಬರುತ್ತದೆ, ವಾರ್ಷಿಕವಾಗಿ ಇಷ್ಟೇ ಮಳೆಯಾಗುತ್ತದೆ, ಇಂಥ ರಾಜ್ಯದ ಇಂಥ ಜಿಲ್ಲೆಯ ಇಂಥ ಪ್ರದೇಶದಲ್ಲಿ ಇಂತಿಷ್ಟೇ ಮಳೆಯಾಗುತ್ತದೆ ಎಂಬುದನ್ನು ಅತ್ಯಂತ ನಿಖರವಾಗಿ ಹೇಳುವ ದಂಧೆ, ಮೊದಲ ಮಳೆಯಿಂದ ಇಳೆಯಲ್ಲಿ ಒಡೆಯುವ ಮೊಳಕೆಯಂತೆ ಮೊಳಕೆಯೊಡೆದಿದೆ. ದೊಡ್ಡ ಮರವಾಗಿ ಟೊಂಗೆಗಳನ್ನು ಎಲ್ಲೆಡೆ ಪಸರಿಸುವುದರಲ್ಲಿ ಸಂಶಯವೇ ಇಲ್ಲ. ಈ ತಜ್ಞರ ತಂಡ ಸದ್ಯಕ್ಕೆ ಮುಂಬೈನಲ್ಲಿ ಬೀಡುಬಿಟ್ಟಿದೆ.
ಹವಾಮಾನ ಇಲಾಖೆ ನೀಡುವ ಅಂಕಿಅಂಶಗಳ ಆಧಾರದ ಮೇಲೆಯೇ ಬೆಟ್ಟಿಂಗ್ ನಡೆಯುತ್ತದೆ. ಹವಾಮಾನ ವೈಪರೀತ್ಯದಂತೆ ಬೆಟ್ಟಿಂಗ್ ಕೂಡ ಡೋಲಾಯಮಾನವಾಗಿರುತ್ತದೆ. ಮಾರುತಗಳು, ತೇವಾಂಶ ಕೂಡ ಬೆಟ್ಟಿಂಗನ್ನು ನಿರ್ಧರಿಸುತ್ತದೆ. ಅನಾಮತ್ 25 ಸಾವಿರ ಕೋಟಿ ರು.ಗೂ ಹೆಚ್ಚು ಹಣ ಹೂಡಲಾಗುತ್ತಿದೆ. ಮಳೆಯ ಮೇಲೆ ಹಣದ ಸುರಿಮಳೆ! ಸದ್ಯ ಪ್ರಕೃತಿಯ ಮೇಲೆ ಮಾನವ ಹಿಡಿತ ಸಾಧಿಸಿಲ್ಲ!











Click it and Unblock the Notifications