ಸಂಪ್ ಮೋಟರ್ ನಲ್ಲಿ ವಿದ್ಯುತ್ ಪ್ರವಹಿಸಿ ನಾಲ್ವರ ಸಾವು

ಮುನಿಯಪ್ಪ ಲೇಔಟ್‌ನ ಒಂಬತ್ತನೇ ಮುಖ್ಯರಸ್ತೆ ನಿವಾಸಿಗಳಾದ ಸಂಧ್ಯಾ (23), ಅವರ ಸಹೋದರಿ ಶಾಲಿನಿ (19), ಮಧು (40) ಮತ್ತು ನರೇಂದ್ರ (19) ಸಾವನ್ನಪ್ಪಿದವರು. ಇವರ ರಕ್ಷಣೆಗೆ ಧಾವಿಸಿದ್ದ ಜಯಂತ್ ಮಿಸ್ತ್ರಿ (22) ಎಂಬುವರಿಗೂ ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದಾರೆ.
ಸ್ನೇಹಿತರಾದ ಮಧು ಮತ್ತು ನರೇಂದ್ರ ಒಡಿಶಾ ಮೂಲದವರಾಗಿದ್ದು, ಅವರು ಸಂಧ್ಯಾ ಅವರ ಮನೆಯ ಕಟ್ಟಡದ ಎರಡನೇ ಅಂತಸ್ತಿನಲ್ಲಿ ವಾಸವಾಗಿದ್ದರು. ಸಂಧ್ಯಾ ಮತ್ತು ನರೇಂದ್ರ ಅವರು ಸಿದ್ಧ ಉಡುಪು ಕಾರ್ಖಾನೆಯಲ್ಲಿ ಹಾಗೂ ಶಾಲಿನಿ ಅವರು ವಾಣಿಜ್ಯ ಸಮುಚ್ಚಯದಲ್ಲಿ ಕೆಲಸ ಮಾಡುತ್ತಿದರು. ಮಧು ಬಡಗಿಯಾಗಿದ್ದರು.
ಆ ತೊಟ್ಟಿಯಿಂದ ವಿದ್ಯುತ್ ಚಾಲಿತ ಮೋಟರ್ ನ ಮೂಲಕ ಇಡೀ ಕಟ್ಟಡಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು. ಕೆಲ ದಿನಗಳ ಹಿಂದೆ ಮೋಟರ್ ಕೆಟ್ಟಿದ್ದ ಹಿನ್ನೆಲೆಯಲ್ಲಿ ಕಟ್ಟಡದ ನಿವಾಸಿಗಳು ತೊಟ್ಟಿಯಿಂದ ನೀರು ತುಂಬಿಕೊಳ್ಳುತ್ತಿದ್ದರು.
ಶಾಲಿನಿ ಅವರು ರಾತ್ರಿ 9 ಗಂಟೆ ಸುಮಾರಿಗೆ ತೊಟ್ಟಿಯಿಂದ ನೀರು ತುಂಬಿಕೊಳ್ಳುತ್ತಿದ್ದಾಗ ಅವರಿಗೆ ವಿದ್ಯುತ್ ಪ್ರವಹಿಸಿ ಕೂಗಿಕೊಂಡರು. ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ ಸಂಧ್ಯಾ, ಮಧು, ನರೇಂದ್ರ ಮತ್ತು ಜಯಂತ್ ಅವರಿಗೂ ವಿದ್ಯುತ್ ಪ್ರವಹಿಸಿ ಕೂಗಿಕೊಂಡರು. ಅವರ ಕೂಗಾಟ ಕೇಳಿ ಸ್ಥಳಕ್ಕೆ ಬಂದ ರಾಜು ಎಂಬುವರು ಕಟ್ಟಡದ ಜಂಕ್ಷನ್ ಬಾಕ್ಸ್‌ನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ನಂತರ ಸ್ಥಳೀಯರ ನೆರವಿನಿಂದ ಜಯಂತ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಲೀಕರ ನಿರ್ಲಕ್ಷ್ಯವೇ ಕಾರಣ: ನೀರಿನ ಮೋಟರ್ ಕೆಟ್ಟು ಹೋಗಿದ್ದ ಬಗ್ಗೆ ಮನೆಯ ಮಾಲೀಕರಿಗೆ ಮಾಹಿತಿ ನೀಡಿ ಸರಿ ಮಾಡಿಸುವಂತೆ ಮನವಿ ಮಾಡಿದ್ದೆವು. ಆದರೆ ಮಾಲೀಕರು ಈ ಬಗ್ಗೆ ಗಮನ ಹರಿಸಿರಲಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿತು' ಎಂದು ಕಟ್ಟಡದ ನಿವಾಸಿಯೊಬ್ಬರು ದೂರಿದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್. ಆಗ್ನೇಯ ವಿಭಾಗದ ಡಿಸಿಪಿ ಡಾ.ಪಿ.ಎಸ್.ಹರ್ಷ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications