ಭ್ರಷ್ಟರ ವಿರುದ್ಧ ಸಮರ ಈಗ ಬಾಬಾ ಸರದಿ

ಜೂನ್4 ರಂದು ದೆಹಲಿಯಲ್ಲಿ ಭ್ರಷ್ಟರ ವಿರುದ್ಧದ ಸತ್ಯಾಗ್ರಹಕ್ಕೆ ಚಾಲನೆ ನೀಡಲಿರುವ ಬಾಬಾ ರಾಮದೇವ್, ಅಮರಣಾಂತ ಉಪವಾಸ ಕೂಡುವುದಾಗಿ ಘೋಷಿಸಿದ್ದಾರೆ. ಕಪ್ಪುಹಣವನ್ನು ಹಿಂದಕ್ಕೆ ಪಡೆಯಲು ಮುಂದಾಗದ ಕೇಂದ್ರ ಸರ್ಕಾರವನ್ನು ತಮ್ಮ ಚಳವಳಿ ಮೂಲಕ ಬಗ್ಗಿಸಲು ರಾಮದೇವ್ ಯತ್ನಿಸುತ್ತಿದ್ದಾರೆ.
ರಾಜಕಾರಣಿಗಳು ಹಾಗೂ ಇತರೆ ಉದ್ಯಮಿಗಳು ವಿದೇಶದಲ್ಲಿ ಹೊಂದಿರುವ ಕಪ್ಪು ಹಣವನ್ನು ಭಾರತಕ್ಕೆ ತಂದು ಸಾರ್ವಜನಿಕ ಸ್ವತ್ತಾಗಿಸಬೇಕು. ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೆಸೆಯಲು ಇದು ಸಕಾಲ. ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರಕ್ಕೆ ಕಪ್ಪು ಹಣದ ಚಲಾವಣೆ ಕಾರಣವಾಗಿದೆ. ಲಕ್ಷಾಂತರ ಕೋಟಿ ರುಪಾಯಿ ಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗುತ್ತಿದೆ. ಬೃಹತ್ ಮೊತ್ತದ ನೋಟುಗಳನ್ನು ಹಿಂದಕ್ಕೆ ಪಡೆದರೆ ಭ್ರಷ್ಟಾಚಾರವನ್ನು ಹೋಗಲಾಡಿಸಬಹುದು ಎಂದು ಬಾಬಾ ಅಭಿಪ್ರಾಯಪಟ್ಟಿದ್ದಾರೆ.
ಬಾಬಾ ಜನಪ್ರಿಯತೆ: ಸುಮಾರು 1.5 ಲಕ್ಷ ಜನ ಚಳವಳಿಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಉಚಿತ ದೂರವಾಣಿ ಸಂಖ್ಯೆ 0223308112 ಗೆ ಒಂದು ಮಿಸ್ ಕಾಲ್ ನೀಡುವ ಮೂಲಕ ನೋಂದಾಯಿಸಿಕೊಂಡು ನಿಮ್ಮ ಬೆಂಬಲ ವ್ಯಕ್ತಪಡಿಸಬಹುದು. ಕಾರ್ಯಕ್ರಮದ ವಿವರಗಳು ನಿಮ್ಮ ಮೊಬೈಲ್ ಗೆ ಎಸ್ ಎಂಎಸ್ ಮೂಲಕ ಕಳಿಸಲಾಗುತ್ತದೆ. ಇದಲ್ಲದೆ, ಆರ್ಕುಟ್, ಟ್ವಿಟ್ಟರ್, ಫೇಸ್ ಬುಕ್ ಮೂಲಕ ಕೂಡಾ ಪ್ರಚಾರ ಕಾರ್ಯ ಆರಂಭಿಸಲಾಗಿದ್ದು, ಭಾರತ್ ಸ್ವಾಭಿಮಾನ್ ಟ್ರಸ್ಟ್ ನ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಸಾವಿರಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಲಿಂಗ ಕಾಮ ಸಕ್ರಮ ಎಂದ ಸುಪ್ರೀಂಕೋರ್ಟ್ ವಿರುದ್ಧವೇ ತಿರುಗಿಬಿದ್ದಿದ್ದ ಬಾಬಾ ರಾಮದೇವ್ ಅವರ ರಾಜಕೀಯ ಪಕ್ಷ ಭಾರತ್ ಸ್ವಾಭಿಮಾನ ಟ್ರಸ್ಟ್ ಮೂಲಕ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಾಸ್ ತಂದು ಜನ ಸಾಮಾನ್ಯರ ಬದುಕನ್ನು ಸುಧಾರಿಸುವುದು ಇವರ ಮೂಲ ಉದ್ದೇಶ. ಇದಲ್ಲದೆ ಸ್ವದೇಶಿ ವಸ್ತು ಬಳಕೆ, ವಿದೇಶಿ ಕಂಪೆನಿಗಳ ದಬ್ಬಾಳಿಕೆ ವಿರುದ್ಧ ದನಿ ಎತ್ತಿದ್ದಾರೆ.












Click it and Unblock the Notifications