ಮೈಸೂರು ಮೃಗಾಲಯದಲ್ಲಿ ಹೆಚ್ಚಿದ ದತ್ತು ಸ್ವೀಕಾರ

1995ರಲ್ಲಿ ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರ ಮೈಸೂರಿನಲ್ಲಿ ಆರಂಭವಾಗಿತ್ತು. ಆದರೆ ಆರಂಭದ ವರ್ಷಗಳಲ್ಲಿ ಅದು ಅಷ್ಟೇನೂ ಜನಪ್ರಿಯವಾಗಿರಲಿಲ್ಲ. ಆದರೆ ಇತ್ತಿಚಿನ ಒಂದೆರಡು ವರ್ಷಗಳಲ್ಲಿ ಪ್ರಾಣಿಗಳ ದತ್ತು ಸ್ವೀಕರಿಸುವ ಕ್ರೇಝ್ ಹೆಚ್ಚಾಗಿತ್ತು.
ಇದರ ಪರಿಣಾಮವಾಗಿ ಕಳೆದ ವರ್ಷ ಮೈಸೂರು ಮೃಗಾಲಯದ ಸುಮಾರು 394 ಪ್ರಾಣಿ ಪಕ್ಷಿಗಳಿಗೆ ದತ್ತು ಸ್ವೀಕಾರದ ಭಾಗ್ಯ ದೊರಕಿದೆ. 2010-11ರ ಆರ್ಥಿಕ ವರ್ಷದಲ್ಲಿ ಪ್ರಾಣಿಪಕ್ಷಿಗಳ ದತ್ತು ಸ್ವೀಕಾರದಿಂದ ಮೈಸೂರು ಮೃಗಾಲಯ ಸುಮಾರು 30.2 ಲಕ್ಷ ರು. ಸಂಗ್ರಹಿಸಿದೆ.
ಆದರೆ ತಾವರೆಕೊಪ್ಪದಲ್ಲಿ ಮೈಸೂರು ಮೃಗಾಲಯಕ್ಕಿಂತ ಹೆಚ್ಚು ಹುಲಿಗಳಿದ್ದರೂ ಇಲ್ಲಿ ದತ್ತು ಯೋಜನೆ ಹೆಚ್ಚು ಜನಪ್ರಿಯವಾಗಿಲ್ಲ ಎಂದು ದಿ ಹಿಂದು ವರದಿ ಮಾಡಿದೆ. ಪ್ರಾಣಿ ದತ್ತು ತೆಗೆದುಕೊಳ್ಳುವಂತೆ ಸೆಲೆಬ್ರಿಟಿಗಳನ್ನು ಆಕರ್ಷಿಸಲು ಪ್ರಯತ್ನ ಮಾಡುತ್ತಿರುವುದಾಗಿ ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ.
ಇತ್ತೀಚೆಗೆ ಈ ಯೋಜನೆಯ ಜನಪ್ರಿಯತೆಗೆ ಕ್ರಿಕೆಟ್ ಆಟಗಾರರು, ಸಿನಿಮಾ ನಟನಟಿಯರು, ರಾಜಕಾರಣಿಗಳು ಮತ್ತು ಉದ್ಯಮಿಗಳು ಕೂಡ ಕಾರಣ. ಅನಿಲ್ ಕುಂಬ್ಲೆ ಜಿರಾಫೆ ಮರಿಯೊಂದನ್ನು ಮತ್ತು ಏಷ್ಯಾದ ಸಿಂಹವೊಂದನ್ನು ದತ್ತು ತೆಗೆದುಕೊಂಡಿದ್ದಾರೆ.
ಜಾವಗಲ್ ಶ್ರೀನಾಥ್ ಒಂದು ಚಿರತೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಇದರಿಂದ ಉತ್ಸಾಹ ಪಡೆದ ಜಹೀರ್ ಖಾನ್ ಹುಲಿಯೊಂದನ್ನು ದತ್ತು ಪಡೆದಿದ್ದು ಅದಕ್ಕೆ ಸುಮಾರು 1 ಲಕ್ಷ ರು. ವಿನಿಯೋಗಿಸಿದ್ದಾರೆ.
ಪ್ರಾಣಿಗಳ ದತ್ತು ಸ್ವೀಕಾರದಲ್ಲಿ ರಾಜಕಾರಣಿಗಳೂ ಹಿಂದೆ ಬಿದ್ದಿಲ್ಲ. ಅಮೂಲ್ಯ ಎಂಬ ಹುಲಿಯನ್ನು ಸತತ ಮೂರನೇ ವರ್ಷಬಿ. ಎಸ್. ಯಡಿಯೂರಪ್ಪ ದತ್ತು ತೆಗೆದುಕೊಂಡಿದ್ದಾರೆ.
ಡಿ. ಕೆ. ಶಿವಕುಮಾರ್ ಒಂದು ಗೊರಿಲ್ಲಾ ದತ್ತು ತೆಗೆದುಕೊಂಡಿದ್ದಾರೆ. ಜೊತೆಗೆ ಎರಡು ಕಿಂಗ್ ಕೋಬ್ರಾಗಳಿಗೆ ಒಂದು ಲಕ್ಷ ರು. ನೀಡಿ ಅಜೀವ ದತ್ತು ಸ್ವೀಕಾರ ಮಾಡಿದ್ದಾರೆ. ಕನ್ನಡ ಚಿತ್ರನಟ ದರ್ಶನ್ ಆನೆಯ ಮರಿಯನ್ನು ದತ್ತು ತೆಗೆದುಕೊಂಡಿದ್ದಾರೆ.












Click it and Unblock the Notifications