ಮುಂಗಾರು ಮಳೆ ಕೇರಳದಲ್ಲಿ ಮೇ 31ಕ್ಕೆ ಪ್ರವೇಶ

ಮುಂದಿನ ಮೂರು ದಿನಗಳೊಳಗೆ ನೈಋತ್ಯ ಮುಂಗಾರು ಅಂಡಮಾನ್ ಪ್ರದೇಶಕ್ಕೆ ಕಾಲಿರಿಸುವ ಸಾಧ್ಯತೆ ಇದೆ. ಮೇ 31ರಂದು ಮುಂಗಾರು ಕೇರಳ ಪ್ರವೇಶಿಸಲಿದೆ. ಬಿರು ಬಿಸಿಲಿನ ಬೇಗೆಯಿಂದ ಬಸವಳಿದ ಮತ್ತು ತುದಿಗಾಲಲ್ಲಿ ನಿಂತು ಮಳೆಯ ಆಗಮನವನ್ನೇ ನಿರೀಕ್ಷಿಸುತ್ತಿರುವ ಕೃಷಿಕರಿಗೆ ಇದು ಸಿಹಿ ಸುದ್ದಿಯಾಗಿದೆ.
ಸಾಮಾನ್ಯವಾಗಿ ಮೇ 15ರಿಂದ ಮೇ 20ರೊಳಗೆ ದಕ್ಷಿಣ ಅಂಡಮಾನ್ ಪ್ರದೇಶದಲ್ಲಿ ಮಳೆಗಾಲ ಆರಂಭಗೊಳ್ಳುವುದು ರೂಢಿ. ಈ ವರ್ಷ ಅದು ಇನ್ನೂ ಒಂದು ವಾರ ತಡವಾಗಿದೆ. ಅದರೆ ಮುಂಗಾರು ಕೇರಳ ಪ್ರವೇಶಿಸುವುದಕ್ಕೆ ಇದರಿಂದ ಯಾವುದೇ ಧಕ್ಕೆಯೊದಗದು ಎಂದು ಇಲಾಖೆಯ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
ಬಂಗಾಳ ಕೊಲ್ಲಿಯ ಉತ್ತರಕ್ಕೆ ಮೇ 28ರ ವೇಳೆಗೆ ವಾಯುಭಾರ ಕುಸಿತ ಉಂಟಾಗಲಿದೆ. ಇದರಿಂದ ಮಳೆ ಮೋಡಗಳ ಮುಂದೊತ್ತುವಿಕೆಗೆ ಸಹಾಯವಾಗಲಿದೆ ಎಂದು ಇಲಾಖೆ ತಿಳಿಸಿದೆ. ಕೇರಳದಲ್ಲಿ ಮಳೆ ಕಾಲಿಟ್ಟರೆ ದಕ್ಷಿಣ ಭಾರತದಲ್ಲಿ ಮಳೆಗಾಲ ಆರಂಭವಾಯಿತೆಂದೇ ಅರ್ಥ. ಹಿಂದಿನ 50 ವರ್ಷಗಳ ಸರಾಸರಿಯಂತೆಯೇ ಈ ವರ್ಷವೂ ಶೇ. 98 ಮುಂಗಾರು ಮಳೆಯಾಗಲಿದೆ ಎಂದು ಹೇಳಲಾಗಿದೆ.












Click it and Unblock the Notifications