ಬಿಜೆಪಿ ಸರ್ಕಾರ ಉರುಳಿಸಲು ಕಾಂಗ್ರೆಸ್ ಸುಪಾರಿ

ಇಂದು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಸಿಎಂ ಯಡಿಯೂರಪ್ಪ ಅವರು, ರಾಜ್ಯಪಾಲರ ಕ್ರಮವನ್ನು ಕಟುವಾಗಿ ವಿರೋಧಿಸಿದರು. ಇಂದು ಅಥವಾ ನಾಳೆ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ, ಕೇಂದ್ರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಜನಾದೇಶವನ್ನು ರಾಜ್ಯಪಾಲರು ದಿಕ್ಕರಿಸಿದ್ದಾರೆ ಎಂದು ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿಕೊಡಲಿದ್ದೇನೆ ಎಂದರು.
ಬಳಿಕ ರಾಜ್ಯಪಾಲರ ವಿರುದ್ಧ ಕೆಂಡಕಾರಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ. ರಾಜ್ಯಪಾಲರು ಕರ್ನಾಟಕದ ಸ್ವಾಭಿಮಾನವನ್ನು ಪ್ರಶ್ನಿಸಿದ್ದಾರೆ. ಜನರ ಸ್ವಾಭಿಮಾನವನ್ನು ಕೆಣಕಿದ ಇವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಕಟುವಾಗಿ ಮಾತನಾಡಿದರು. ಇಂದು ಮಧ್ಯಾಹ್ನ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ.
ಸಭೆಯಲ್ಲಿ ಬಿಜೆಪಿಯ ಎಲ್ಲ ಶಾಸಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈಗಾಗಲೆ ಎರಡು ಬಾರಿ ಬಹುಮತ ಸಾಬೀತು ಪಡಿಸಿದ್ದೇವೆ. ಈಗಲೂ ಬಹುಮತ ಸಾಬೀತು ಮಾಡಿ ಎಂದು ಕೇಳಿದ್ದರೆ, ಸಾಬೀತು ಪಡಿಸಿ ಮುಂದಿನ ಹೆಜ್ಜೆ ಇಡುತ್ತಿದ್ದೆವು. ಕೇಂದ್ರದ ನಾಯಕತ್ವ ನಮ್ಮ ಜೊತೆಗಿದೆ ಎಂದು ಯಡಿಯೂರಪ್ಪ ವಿಶ್ವಾಸಯುತವಾಗಿ ಮಾಡಿದರು.
ಇಂದು ದೆಹಲಿಯಲ್ಲೂ ಸಭೆ: ನವದೆಹಲಿಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಎನ್‌ಡಿಎ ಸಭೆ ನಡೆಯಲಿದೆ. ಎಲ್ ಕೆ ಆಡ್ವಾಣಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಬಿಜೆಪಿಯ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಪಾಲರ ಕ್ರಮಕ್ಕೆ ಮುಂದಿನ ಹೆಜ್ಜೆ ಏನು ಎಂಬುದು ಸಭೆಯಲ್ಲಿ ನಿರ್ಧಾರವಾಗಲಿದೆ.
ರಾಜ್ಯಪಾಲರಾಗಿ ಮುಂದುವರಿಯುವ ಹಕ್ಕು ರಾಜ್ಯಪಾಲರಿಗಿಲ್ಲ. ರಾಜ್ಯಪಾಲರ ಕ್ರಮ ತಪ್ಪು, ರಾಜ್ಯಪಾಲರು ಸದ್ದಾ ಹುಸೇಂ ಅಲ್ಲ ಗಢಾಪಿ ಅಲ್ಲ. ಕರ್ನಾಟಕದ ಜನತೆಯ ಸ್ವಾಭಿಮಾನವನ್ನು ಕೆಣಕಿದರೆ ಸುಮ್ಮನಿರಲ್ಲ ಎಂದು ಶಾಸಕ ಸಿ ಟಿ ರವಿ ತಿಳಿಸಿದರು. ಏತನ್ಮಧ್ಯೆ ರಾಜ್ಯಪಾಲರ ವಿಶೇಷ ಅಧಿಕಾರಿ ತಿವಾರಿ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ತಲುಪಿಸಿದ್ದಾರೆ.
ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರೊಂದಿಗೆ ಇಂದು ಮುಖ್ಯಮಂತ್ರಿಗಳ ನಿವಾಸದಲ್ಲಿ ಚರ್ಚೆ ನಡೆಯುತ್ತಿದೆ. ಹಾರ್ನಳ್ಳಿ ಅವರೊಂದಿಗೆ ಚರ್ಚಿಸಿ ನ್ಯಾಯಾಂಗ ಹೋರಾಟದ ಬಗ್ಗೆ ಚಿಂತನೆ ನಡೆಯಲಿದೆ. ಸಭೆಯಲ್ಲಿ ಸಚಿವರಾದ ವಿ ಸೋಮಣ್ಣ, ಸುರೇಶ್ ಕುಮಾರ್ ಸೇರಿದಂತೆ ಸಿ ಟಿ ರವಿ, ರಾಮಾ ಜೋಯೀಸ್ ಪಾಲ್ಗೊಳ್ಳಲಿದ್ದಾರೆ. (ದಟ್ಸ್‌ಕನ್ನಡ ವಾರ್ತೆ)












Click it and Unblock the Notifications