ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಶಿ ಪಟ್ಟಶಿಷ್ಯ ಮಾಧವ ಗುಡಿ ಗಾನಲೀನ

By Prasad
|
Google Oneindia Kannada News

Pandit Madhava Gudi
ಧಾರವಾಡ, ಏ. 22 : ಪಂಡಿತ ಭೀಮಸೇನ ಜೋಶಿ ಅವರ ಪಟ್ಟಶಿಷ್ಯರಲ್ಲೊಬ್ಬರಾಗಿದ್ದ ಖ್ಯಾತ ಹಿಂದೂಸ್ತಾನಿ ಗಾಯಕ ಮಾಧವ ಗುಡಿ (69) ಅವರು ಗುರುವಾರ ಧಾರವಾಡದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಗುರು ಭೀಮಸೇನ ಜೋಶಿ ಅವರು ಗಾನದಲ್ಲಿ ಲೀನವಾಗಿ (ಜ.23) ಮೂರೇ ತಿಂಗಳಲ್ಲಿ ಶಿಷ್ಯನೂ ಗಂಧರ್ವಲೋಕ ಸೇರಿಕೊಂಡಿರುವುದು ಸಂಗೀತಲೋಕಕ್ಕೆ ಭಾರೀ ಆಘಾತ ತಂದಿದೆ.

ಧಾರವಾಡದಲ್ಲಿ ಜನಿಸಿದ್ದ ಮಾಧವ ಗುಡಿ ಅವರು ಸುಮಾರು 12 ವರ್ಷಗಳ ಕಾಲ ಭೀಮಸೇನ ಜೋಶಿ ಅವರಲ್ಲಿ ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿದ್ದರು. ಕಿರಾಣಾ ಘರಾಣಾದಲ್ಲಿ ಅಪ್ರತಿಮ ಸಾಧನೆಗೈದಿದ್ದ ಮಾಧವ ಗುಡಿ ಅವರನ್ನು ಕರ್ನಾಟಕ ಸರಕಾರ ನೀಡುವ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿ ಹುಡುಕಿಕೊಂಡು ಬಂದಿತ್ತು. ಜೋಶಿ ಮತ್ತು ಗುಡಿ ಅವರ ಜುಗಲಬಂದಿ ಭಾರತದ ಎಲ್ಲಾ ಪ್ರದೇಶಗಳಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿತ್ತು.

ಭೀಮಸೇನ ಜೋಶಿ ಅವರಲ್ಲಿ ಶಿಷ್ಯತ್ವ ಸ್ವೀಕರಿಸುವ ಮೊದಲು ಮಾಧವ ಗುಡಿ ಅವರು ಬಸವರಾಜ ರಾಜಗುರು ಅವರಲ್ಲಿ ಆರಂಭಿಕ ತರಬೇತಿ ಪಡೆದಿದ್ದರು. ಜೋಶಿ ಅವರಂತೆಯೇ ಮಾಧವ ಗುಡಿ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಅನೇಕ ಯುವ ಪ್ರತಿಭೆಗಳಿಗೆ ತರಬೇತಿ ನೀಡಿದ್ದಾರೆ. ಮಾಧವ ಗುಡಿಯವರು ಆಕಾಶವಾಣಿಯ ಅಗ್ರ ಕಲಾವಿದರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಸಲಕ ಸರಕಾರಿ ಮರ್ಯಾದೆಗಳೊಂದಿಗೆ ಶುಕ್ರವಾರ ಹೊಸಯಲ್ಲಾಪುರದಲ್ಲಿ ಮಾಡಲಾಯಿತು.

ಗಣ್ಯರ ಸಂತಾಪ : ಖ್ಯಾತ ಹಿಂದೂಸ್ತಾನಿ ಗಾಯಕ ಮಾಧವ ಗುಡಿಯವರನ್ನು ಕಳೆದುಕೊಂಡ ಕರ್ನಾಟಕದ ಸಂಗೀತಲೋಕ ಇಂದು ಬಡವಾಗಿದೆ. ಜೋಶಿ ಅವರ ಶಿಷ್ಯರಾಗಿ ಗುಡಿಯವರು ಅಪ್ರತಿಮ ಸಾಧನೆ ಮಾಡಿದ್ದರು. ಅವರ ನಿಧನದ ದುಃಖವನ್ನು ಭರಿಸಲು ದೇವರು ಅವರ ಕುಟುಂಬ ವರ್ಗದವರಿಗೆ ಶಕ್ತಿಕೊಡಲೆಂದು ಅವರು ಪ್ರಾರ್ಥಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಣ್ಣ ನೀರಾವರಿ ಖಾತೆ ಸಚಿವ ಗೋವಿಂದ ಎಂ. ಕಾರಜೋಳ, ವಾರ್ತಾ ಇಲಾಖೆ ನಿರ್ದೇಶಕ ಡಾ| ಮುದ್ದು ಮೋಹನ್‌ ಮತ್ತಿತರ ಗಣ್ಯರು ಗುಡಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಮಾಧವಗುಡಿ ಅವರು ಕಿರಾಣಾ-ಘರಾಣಾ ಪರಂಪರೆಯ ಸರ್ವಶ್ರೇಷ್ಠ ಗಾಯಕರಾಗಿದ್ದರು ಎಂದು ಡಾ: ಮುದ್ದು ಮೋಹನ್ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

English summary
Hindustani vocalist Pandit Madhava Gudi passed away in Dharwad on April 22 early morning. He was disciple of Pandit Bhimsen Joshi, who passed away on Jan 23. Gudi was specialist in Kirana gharana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X