ಲಗ್ಗೆರೆ ಅಟೋ ಚಾಲಕನ ಭೀಕರ ಕೊಲೆಗೆ ಏನು ಕಾರಣ?

ಲಗ್ಗೆರೆಯ ಲಕ್ಷ್ಮೀದೇವಿನಗರದ ಮುಖ್ಯರಸ್ತೆಯ ಕೆಎಸ್ ಬಿ.ಬಿ.ಕ್ವಾರ್ಟಸ್ ನಿವಾಸಿ ಬಿಎಂ ರಾಜಶೇಖರಮೂರ್ತಿ (48) ಕೊಲೆಯಾದ ವ್ಯಕ್ತಿ. ಆದರೆ, ಪೊಲೀಸರು ಕೊಲೆಯ ಕಾರಣವನ್ನು ಇನ್ನು ಸ್ಪಷ್ಟಪಡಿಸಿಲ್ಲ. ರಾಜಶೇಖರ್ ಮೃತದೇಹವನ್ನು ನೋಡಲು ಆತನ ಪತ್ನಿ ಲಕ್ಷ್ಮಿ ಬಂದಿರಲಿಲ್ಲ. ಅಂತ್ಯಕ್ರಿಯೆಯ ಯಾವುದೇ ಕಾರ್ಯಕ್ರಮದಲ್ಲೂ ಆಕೆಯ ಸುಳಿವಿರಲಿಲ್ಲ.
ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ರಾಜಶೇಖರ ಸಾಮಾನ್ಯವಾಗಿ ರಾತ್ರಿ ವೇಳೆ ಕೆಲಸ ಮಾಡುತ್ತಿದ್ದ. ಆರು ವರ್ಷದ ಹಿಂದೆ ಪತ್ನಿ ಲಕ್ಷ್ಮಿ ಜೊತೆ ಜೋರು ಜಗಳ ನಡೆದು ಇಬ್ಬರು ದೂರಾಗಿದ್ದರು. ಇಬ್ಬರು ಮಕ್ಕಳನ್ನು ಕರೆದುಕೊಂಡು ಬನಶಂಕರಿಯಲ್ಲಿ ವಾಸಿಸತೊಡಗಿದ್ದ ಲಕ್ಷ್ಮಿ, ರಾಜಶೇಖರನ ಮನೆ ಕಡೆಗೆ ಮತ್ತೆ ಕಾಲಿಡಲಿಲ್ಲ.
ಕೊಲೆಯಾದ ರಾತ್ರಿ: ರಾಜಶೇಖರ ಸೋಮವಾರ ಮಧ್ಯರಾತ್ರಿ ತನಕ ಆಟೋ ಓಡಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಎಸ್‌ಎನ್‌ಎಂ ಟ್ರೇಡರ್ಸ್ ಸಿಮೆಂಟ್ ಅಂಗಡಿ ಬಳಿ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಏನು ಎತ್ತ ಎಂದು ರಾಜಶೇಖರ ವಿಚಾರಿಸುವ ಮೊದಲೇ ಮನಸೋ ಇಚ್ಛೆ ಮಚ್ಚು, ಲಾಂಗುಗಳಿಂದ ಹಲ್ಲೆ ನಡೆಸಿದ್ದಾರೆ. ಪೊಲೀಸರ ವರದಿ ಪ್ರಕಾರ ರಾಜಶೇಖರ ಅವರ ದೇಹದ ಎದೆ, ಕಿಬ್ಬೊಟ್ಟೆ ಸೇರಿದಂತೆ ಸುಮಾರು 11 ಕಡೆ ಇರಿತ ಚಾಕುವಿನಿಂದ ಇರಿತಕ್ಕೊಳಗಾದ ಗುರುತುಗಳಿವೆ.
ಬೆಳಗ್ಗೆ ಆಟೋ ಪಕ್ಕದಲ್ಲಿ ಹೆಪ್ಪುಗಟ್ಟಿದ್ದ ರಕ್ತದ ಮಡುವಿನಲ್ಲಿ ಮಲಗಿದ್ದ ರಾಜಶೇಖರನ ಶವವನ್ನು ನೋಡಿದ ಸಾರ್ವಜನಿಕರು ಸಮೀಪದ ರಾಜಗೋಪಾಲ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ರಾಜಶೇಖರ ಅವರ ತಂದೆ ಹಾಗೂ ಸೋದರನಿಗೆ ಒಪ್ಪಿಸಲಾಗಿದೆ. ಅಂತ್ಯಕ್ರಿಯೆಗೆ ರಾಜಶೇಖರನ ಮಕ್ಕಳು ಬಂದಿದ್ದರು ಆದರೆ, ಪತ್ನಿ ಲಕ್ಷ್ಮಿ ಸುಳಿವಿರಲಿಲ್ಲ. ಯಾವುದೋ ಹಳೆ ವೈಷಮ್ಯ ಕೊಲೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ರಾಜಗೋಪಾಲನಗರ ಠಾಣಾಧಿಕಾರಿ ಹೇಳಿದರು.












Click it and Unblock the Notifications