ಭಾರತ ಕಪ್ ಗೆದ್ದ ಹಜಾರೆಗೆ ಬಿಡಿಎ ಸೈಟು

ದೇಶಕ್ಕೆ 64 ವರ್ಷಗಳ ಬಳಿಕ ಮತ್ತೊಮ್ಮೆ ಸ್ವಾತಂತ್ರ್ಯ ಬಂದಂತಾಗಿದೆ. ನಮ್ಮ ಸನ್ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸೇರಿದಂತೆ ಹಲವಾರು ಸಿನಿಮಾ ತಾರೆಗಳು ಅಣ್ಣಾ ಹಜಾರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಕ್ರಿಕೆಟ್ ತಾರೆಗಳಿಗೆ ಏನು ಬಂತೋ ದಾಡಿ ಗೊತ್ತಿಲ್ಲ. ಕಮಕ್ ಕಿಮಕ್ ಎನ್ನಲಿಲ್ಲ. ಬರಿ ತಾವಾಯಿತು ತಮ್ಮ ಐಪಿಎಲ್ ಡೀಲ್‌ಗಳಾಯಿತು. ದೇಶ ಏನಾದರೆ ನಮಗೇನಾಗಬೇಕು ಎಂಬಂತೆ ಕೇವಲ ತಮ್ಮ ಪಾಲಿನ ಜಾಹೀರಾತುಗಳಿಗೆ ಸಹಿ ಹಾಕುವುದರಲ್ಲೇ ಮುಳುಗಿ ಹೋದರು.
ಇಂತಹ 'ಮಹಾನ್' ಪಟುಗಳಿಗೆ ನಮ್ಮ ಯಡಿಯೂರಪ್ಪನವರು ರು.25 ಲಕ್ಷ ಬಹುಮಾನ ಪ್ರಕಟಿಸಿದ್ದಾರೆ. ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಹೋರಾಟ ಮನೋಭಾವವೇ ಇಲ್ಲದ ಇಂತಹವರಿಗೆ ಈ ಪಾಟಿ ದುಡ್ಡು ಕೊಡುವುದು ಯಾವ ನ್ಯಾಯ? ಸಾಧ್ಯವಾದರೆ ಯಡಿಯೂರಪ್ಪನವರು ದೇಶ ಕಂಡ ನಿಜವಾದ ನಾಯಕ ಅಣ್ಣಾ ಹಜಾರೆಗೆ ಒಂದು ಬಿಡಿಎ ಸೈಟು ಕೊಡಲಿ ನೋಡೋಣ.
ಈಗಾಗಲೆ ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆರೋಪಗಳಿವೆ. ಅಣ್ಣಾ ಹಜಾರೆ ಅವರಿಗೆ ಸಿಕ್ಕ ಜನ ಬೆಂಬಲ ಕಂಡು ತಾವೂ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವುದಾಗಿ ಹೇಳಿದ್ದಾರೆ! ಇಂದು ಇಡೀ ದೇಶವೇ ಅಣ್ಣಾ ಹಜಾರೆ ಅವರನ್ನು ಕೊಂಡಾಡುತ್ತಿದೆ. ಅವರ ನಿಸ್ವಾರ್ಥ ಸೇವೆಯನ್ನು ಯಡಿಯೂರಪ್ಪ ಅವರು ಕೇವಲ ಅಭಿನಂದಿಸಿದರೆ ಸಾಲದು. ಅವರಿಗೊಂದು 40x60 ಬಿಡಿಎ ಸೈಟು ಕೊಡಲಿ ಅಥವಾ ರು.25-30 ಲಕ್ಷ ನಗದು ಬಹುಮಾನ ಘೋಷಿಸಿ ನಿಜವಾದ ನಾಯಕತ್ವವನ್ನು ಬೆಂಬಲಿಸಲಿ. ಏನಂತೀರಾ ಮಿಸ್ಟರ್ ಸಿಎಂ?
ನಮ್ಮ ಮಾತು ಕೇಳಿ ಅದರಂತೆ ವರ್ತಿಸಿದರೆ ನೀವೂ ಕೂಡ ಏಕ್ ದಂ ದೊಡ್ಡ ಹೀರೋನೇ ಆಗ್ತೀರಾ. ಇಡೀ ಇಂಡಿಯಾದಲ್ಲೇ ಯಾವ ಮುಖ್ಯಮಂತ್ರಿಯ ಕನಸಿನಲ್ಲೂ ಬಾರದ ಇಂಥ ಐಡಿಯಾಗಳನ್ನು ದಟ್ಸ್ ಕನ್ನಡ ದಯಪಾಲಿಸುತ್ತಿದೆ. ಉಪಯೋಗಿಸಿ, ಕರ್ನಾಟಕಕ್ಕೆ ಹೆಸರು ತನ್ನಿ. Thank you for listening to Oneindia-Kannada.
;











Click it and Unblock the Notifications